ಬೆಳಗಾವಿ: ಸಿಎಂ ಸಿದ್ದರಾಮಯ್ಯ ಈ ಬಾರಿ ಮಂಡನೆ ಮಾಡಿರುವ ಬಜೆಟ್ ಹಿಂದೂ ಮತ್ತು ಮುಸಲ್ಮಾನರ ಮಧ್ಯೆ ಒಡಕು ತರಲಿದ್ದು, ಕಮ್ಯುನಲ್ ಹಾಗೂ ಕ್ರಿಮಿನಲ್ ರಾಜಕಾರಣಕ್ಕೆ ಪೋತ್ಸಾಹ ನೀಡುವಂತಹ ಬಜೆಟ್ ಆಗಿದೆ ಎಂದು ವಿಧಾನ ಪರಿಷತ್ ಬಿಜೆಪಿ ಸದಸ್ಯ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಇಂದು(ಮಾರ್ಚ್.8) ರಾಜ್ಯ ಬಜೆಟ್ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ ಅವರು ಶುಕ್ರವಾರ ಮಂಡಿಸಿರುವ ರಾಜ್ಯ ಬಜೆಟ್ ಹಿಂದೂ ಮತ್ತು ಮುಸಲ್ಮಾನರ ನಡುವೆ ಒಡಕು ಮೂಡಿಸುತ್ತದೆ. ಕಾಂಗ್ರೆಸ್ ಪಕ್ಷ ಮುಸಲ್ಮಾನ್ ಲೀಗ್‌ನ ಅಜೆಂಡಾ ಅನುಸರಿಸುವ ಮೂಲಕ ಕೇವಲ ಒಂದೇ ಸಮುದಾಯವನ್ನು ಓಲೈಸುವ ರಾಜಕಾರಣ ಮಾಡುತ್ತಿದ್ದಾರೆ. ಇದರಿಂದ ಭವಿಷ್ಯದಲ್ಲಿ ಅಪಾಯಕಾರಿ ಬೆಳವಣಿಗೆ ಆಗಲಿದೆ ಎಂದು ಹೇಳಿದರು.
ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಮಹಮ್ಮದ್ ಅಲಿ ಜಿನ್ನಾ ಧಾರ್ಮಿಕತೆ ಆಧಾರದಲ್ಲಿ ದೇಶಗಳನ್ನು ವಿಭಜನೆ ಮಾಡಿದ್ದರು. ಆದರೆ ಇದೀಗ ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ನಿಂದ ಈಗ ಆತ್ಮವೂ ಖುಷಿಯಾಗಿರಬೇಕು. ಹೀಗಾಗಿ ಇದು ಮುಸಲ್ಮಾನ ಲೀಗ್ ಬಜೆಟ್ ಅಥವಾ ಕಾಂಗ್ರೆಸ್ ಬಜೆಟ್ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ ಉತ್ತರಿಸಬೇಕು ಎಂದು ವ್ಯಂಗ್ಯ ಮಾಡಿದರು.
ಸಂವಿಧಾನದಲ್ಲಿ ಧಾರ್ಮಿಕ ಆಧಾರದ ಮೇಲೆ ಮೀಸಲಾತಿಗೆ ಅವಕಾಶವಿರಲಿಲ್ಲ. ಸಂವಿಧಾನ ರಚನಾ ಸಮಿತಿಯೂ ಧಾರ್ಮಿಕ ಆಧಾರದ ಮೇಲೆ ಮೀಸಲಾತಿ ಬೇಡಿಕೆಯನ್ನು ತಿರಸ್ಕರಿಸಿತ್ತು. ಆದರೆ ಸಿದ್ದರಾಮಯ್ಯ ಮಂಡನೆ ಮಾಡಿರುವ ಬಜೆಟ್‌ನ ಮುಖ್ಯಾಂಶಗಳಲ್ಲಿ ಶೈಕ್ಷಣಿಕ ಶುಲ್ಕಗಳ ರಿಯಾಯಿತಿ ಮತ್ತು ಸಂಸ್ಥೆ ಹಾಗೂ ಸರ್ಕಾರಿ ಒಪ್ಪಂದಗಳಲ್ಲಿಯೂ ಮೀಸಲಾತಿಯನ್ನು ಘೋಷಿಸಲಾಗಿದೆ. ಹಾಗಾಗಿ ಈ ಬಾರಿಯ ಬಜೆಟ್ ಹಿಂದೂ ಸಮುದಾಯದವರಿಗೆ ಅಂತಹ ಸವಲತ್ತುಗಳನ್ನು ಘೋಷಣೆ ಮಾಡಿಲ್ಲ ಎಂದು ಹೇಳಿದರು.





