ಮೈಸೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಧ್ಯೆ ಜಟಾಪಟಿ ಇದೀಗ ರಾಜ್ಯಪಾಲರ ಭವನಕ್ಕೆ ತಲುಪಿದ್ದು, ರಾಜ್ಯಪಾಲರು ಮಧ್ಯ ಪ್ರವೇಶಿಸಿ ರಾಜ್ಯ ಸರ್ಕಾರದ ಕ್ರಮ ಕೈಗೊಳ್ಳುವಂತೆ ಸಿ.ಟಿ.ರವಿ ದೂರು ನೀಡಿದ್ದಾರೆ.
ರಾಜಭವನಕ್ಕೆ ಇಂದು(ಡಿಸೆಂಬರ್.30) ಬಿಜೆಪಿ ಮುಖಂಡರೊಂದಿಗೆ ತೆರಳಿದ ಸಿ.ಟಿ.ರವಿ ತಮ್ಮ ಬಂಧನ ಪ್ರಕರಣದ ವಿಚಾರವಾಗಿ ಸತ್ಯಶೋಧನೆ ನಡೆಸುವಂತೆ ಮನವಿ ಮಾಡಿದ್ದಾರೆ. ಅಲ್ಲದೇ ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ನಿರ್ದೇಶನದಂತೆ ಸಂವಿಧಾನ ಮತ್ತು ಕಾನೂನು ಉಲ್ಲಂಘನೆ ಮಾಡಿ ಪೊಲೀಸ್ ಇಲಾಖೆ ಮೂಲಕ ಅಧಿಕಾರದ ದುರ್ಬಳಕೆ ಮಾಡಿದ ರಾಜ್ಯ ಸರ್ಕಾರದ ವಿರುದ್ಧ ಕ್ರಮಕೈಗೊಳ್ಳುವಂತೆ ವಿಧಾನ ಪರಿಷತ್ ವಿಪಕ್ಷ ನಾಯಕ ಎನ್.ಛಲವಾದಿ ನಾರಾಯಣ ಅವರ ನೇತೃತ್ವದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರಿಗೆ ದೂರು ಸಲ್ಲಿಸಿದ್ದಾರೆ.
ಇನ್ನು ಸಿ.ಟಿ. ರವಿ ಅವರು ಈ ದೂರಿನಲ್ಲಿ ಸದನದಲ್ಲಿ ಅಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದೇನೆಂಬ ಬಗ್ಗೆ ತನ್ನ ಬಂಧನವಾಗಿದ್ದು, ಆ ನಂತರ ಆದ ಬೆಳವಣಿಗೆಗಳನ್ನು ಸೇರಿದಂತೆ ಒಟ್ಟು 8 ಪುಟಗಳ ಮೂಲಕ ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದಾರೆ.