ಬೆಂಗಳೂರು: ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆಯಾದ ಬಳಿಕ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ರಾಜಕಾರಣದಲ್ಲಿ ಏನೂ ಬೇಕಾದರೂ ಆಗುತ್ತದೆ. ಹೀಗಾಗಿ ಈ ವಿಷಯ ರಾಜಕೀಯ ಸಾಧ್ಯತೆಯ ಕಲೆಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿಂದು ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಬಳಿಕ ಯೋಗೇಶ್ವರ್ ಜೊತೆಗೆ ಕುಳಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು, ಯೋಗೇಶ್ವರ್ ಪಕ್ಷಕ್ಕೆ ಸೇರಿಕೊಳ್ಳಲು ಯಾವುದೇ ಷರತ್ತು ಹಾಕಿಲ್ಲ. ಇಂದು ಬೆಳಿಗ್ಗೆ 8 ಗಂಟೆಗೆ ನನ್ನನ್ನು ಭೇಟಿ ಮಾಡಿದರು. ಬಳಿಕ, ಸಾಕಷ್ಟು ವಿಚಾರ ಚರ್ಚೆ ಮಾಡಿದ ಮೇಲೆ ನಾನು ಕಾಂಗ್ರೆಸ್‌ನಲ್ಲಿ ಇರಬೇಕೆಂದು ತೀರ್ಮಾನಿಸಿದ್ದೇನೆ ಎಂದರು. ಈ ವಿಚಾರವನ್ನು ನಾನು ತಕ್ಷಣವೇ ಸಿಎಂ ಸಿದ್ದರಾಮಯ್ಯ ಮತ್ತು ಪಕ್ಷದ ವರಿಷ್ಠರ ಗಮನಕ್ಕೆ ತಂದೆ. ಅವರೆಲ್ಲರೂ ಒಪ್ಪಿಗೆ ಸೂಚಿಸಿದ ನಂತರ ಯೋಗೇಶ್ವರ್‌ರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ನಿರ್ಧರಿಸಲಾಯಿತು ಎಂದರು.





