ಬೆಂಗಳೂರು: ಸ್ಮಾರ್ಟ್‌ಮೀಟರ್ ಹಗರಣ ಕರ್ನಾಟಕದಲ್ಲಿ ವ್ಯವಸ್ಥಿತವಾಗಿ ನಡೆದಿದ್ದು, ಸರ್ಕಾರ 9 ಸುಳ್ಳುಗಳ ಮೂಲಕ ಜನರನ್ನು ದಾರಿಗೆಡಿಸಿದೆ. ಕೇಂದ್ರದ ಮಾರ್ಗಸೂಚಿಗಳ ಉಲ್ಲಂಘನೆ, ಟೆಂಡರ್ ಪ್ರಕ್ರಿಯೆಯಲ್ಲಿನ ಅಕ್ರಮಗಳು ಮತ್ತು ಅಧಿಕಾರದ ದುರುಪಯೋಗವನ್ನು ಮಾಡಿಕೊಂಡಿದ್ದಾರೆ. ನಾಗರಿಕರ ನ್ಯಾಯಕ್ಕಾಗಿ ಇದನ್ನು ತಾರ್ಕಿಕ ಅಂತ್ಯಕ್ಕೆ ಒಯ್ಯುತ್ತೇವೆ ಎಂದು ಬಿಜೆಪಿ ಶಾಸಕ ಡಾ.ಸಿ.ಎನ್.ಅಶ್ವಥ್ ನಾರಾಯಣ್ ತಿಳಿಸಿದ್ದಾರೆ.
ನಗರದ ಬಿಜೆಪಿ ಕಚೇರಿಯಲ್ಲಿ ಇಂದು(ಏಪ್ರಿಲ್.1) ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸ್ಮಾರ್ಟ್ ಮೀಟರ್ ಟೆಂಡರ್ ಅನ್ನು ಭಾರತ ಸರ್ಕಾರದ ನಿಗಧಿತ ನಿಯಮಗಳ ಪ್ರಕಾರ ಮಾಡಲಾಗಿದ್ದು, ಪ್ರಿ-ಬಿಡ್ ಟೆಂಡರ್‌ನಲ್ಲಿ ಯಾರೂ ಬಂದಿರಲಿಲ್ಲವೆಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಮತ್ತು ಸಚಿವರು ಹೇಳಿದ್ದರು. ಆದರೆ ಪ್ರಿ-ಬಿಡ್ಡಿಂಗ್‌ನಲ್ಲಿ 10 ಮಂದಿ ಭಾಗವಹಿಸಿದ್ದರು. ಅಲ್ಲದೇ 117 ಜನರು ಮಾಹಿತಿ ಕೇಳಿದ್ದು, ಕೇಂದ್ರದ ನಿಯಮಾವಳಿಯಂತೆ ಐಎಸ್ 16444 ಸ್ಟಾಂಡರ್ಡ್ ಇರುವ ಹತ್ತಾರು ಜನರಿದ್ದಾರೆ. ಅವರನ್ನೇ ರಾಜ್ಯವು ಪರಿಗಣಿಸಬೇಕಿತ್ತು. ಒಂದು ಲಕ್ಷ ಸ್ಮಾರ್ಟ್ ಮೀಟರ್ ಉತ್ಪಾದಿಸಿ ವಿತರಿಸಿದ ಅನುಭವ ಬೇಕಿತ್ತು. ಜೊತೆಗೆ ಟೆಂಡರ್ 200 ಕೋಟಿ ರೂ.ಗಿಂತ ಅಧಿಕ ಮೊತ್ತದ್ದಾದರೆ ಗ್ಲೋಬಲ್ ಟೆಂಡರ್ ಕರೆಯಬೇಕಿತ್ತು. ಇದನ್ನೂ ಪ್ರಿ-ಬಿಡ್ ವೇಳೆ ಹೇಳಿದ್ದರೂ ಕೂಡ ಅದನ್ನು ಪರಿಗಣಿಸಿಲ್ಲ ಎಂದು ಇಲಾಖೆ ವಿರುದ್ಧ ಆರೋಪಿಸಿದರು.
ರಾಜ್ಯ ಸರ್ಕಾರ, ಕರ್ನಾಟಕದಲ್ಲಿ ಇಂಧನ ಮೀಟರ್‌ಗೆ ಸಂಬಂಧಿಸಿದಂತೆ ರಿಟೇಲ್ ಔಟ್‌ಲೆಟ್‌ನಲ್ಲಿ 5 ವರ್ಷ ಅನುಭವ ಹೊಂದಿರಬೇಕೆಂ ನಿಯಮವನ್ನೂ ಗಣನೆಗೆ ತೆಗೆದುಕೊಂಡಿಲ್ಲ. ಮೀಟರ್ ಡಾಟಾ ಮ್ಯಾನೇಜ್‍ಮೆಂಟ್ ಸೊಲ್ಯೂಶನ್ ಅನ್ನು ಗ್ಲೋಬಲ್ ಆಗಿ ತೆಗೆದುಕೊಂಡಿಲ್ಲ. ಡಿಬಾರ್- ಬ್ಲ್ಯಾಕ್‍ಲಿಸ್ಟ್ ಆದವರನ್ನು ಪರಿಗಣಿಸಬಾರದು ಎಂಬ ನಿಯಮವೂ ಇದೆ. ಆದರೆ ಇಲಾಖೆ ಗ್ಲೋಬಲ್ ಎಂಬುದನ್ನು ಪರಿಗಣಿಸಿಯೇ ಇಲ್ಲ. ಕೇಂದ್ರದ ನಿಯಾಮವಳಿಯಂತೆ ಟೆಂಡರ್ ಕರೆದಿದ್ದಾರೆಂದು ಸಚಿವರು ಹೇಳಿರೋದೆ ಸುಳ್ಳಾಗಿದೆ. ಅಲ್ಲದೇ ಕೇಂದ್ರದ ಮುಖ್ಯ ನಿಯಾಮವಳಿಗಳನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಸ್ಮಾರ್ಟ್ ಮೀಟರ್ ತಾತ್ಕಲಿಕ ಸಂಪರ್ಕ ಪಡೆಯುವವರಿಗೆ ಮತ್ತು ಹೊಸ ಗ್ರಾಹಕರಿಗೆ ಕಡ್ಡಾಯವೆಂದು ಸಚಿವರು ಹೇಳಿದರೆ, ಈ ಇಲಾಖೆ ಸಂಬಂಧಪಟ್ಟ ಅಧಿಕಾರಿಗಳು ಇದು ಕಡ್ಡಾಯವಲ್ಲ ಎಂದು ಹೇಳುತ್ತಾರೆ. ಇನ್ನು ಕೇಂದ್ರ ವಿದ್ಯುತ್ ಪ್ರಾಧಿಕಾರವೂ, ಎಲ್ಲಾ ಗ್ರಾಹಕರಿಗೆ, ಟ್ರಾನ್ಸ್‌ಫಾರ್ಮರ್ ಮತ್ತು ಫೀಡರ್‌ಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಸಿದ ನಂತರವೇ ಹೊಸ ಗ್ರಾಹಕರಿಗೆ ಕಡ್ಡಾಯ ಮಾಡಬಹುದೆಂದು ಹೇಳಿದೆ. ಆದರೆ ಸರ್ಕಾರ ಮಾತ್ರ ಗ್ರಾಹಕರ ಜೇಬಿನಿಂದ ಲೂಟಿ ಮಾಡಲು ಹೊರಟಿದೆ ಎಂದು ಕಿಡಿಕಾರಿದರು.
ಇನ್ನು ಇಂಧನ ಇಲಾಖೆಯೂ ರಾಜ್ಯದ ಜನತೆಯ ಹಣವನ್ನು ಲೂಟಿ ಮತ್ತು ಕಳ್ಳತನ ಮಾಡುತ್ತಿರುವುದನ್ನು ತಪ್ಪಿಸಿ, ಗ್ರಾಹಕರ ರಕ್ಷಣೆ ಮಾಡುವುದು ನಮ್ಮ ಪಕ್ಷದ ಕರ್ತವ್ಯವಾಗಿದೆ. ಹೀಗಾಗಿ ಇದನ್ನು ತಾರ್ಕಿಕ ಅಂತ್ಯಕ್ಕೆ ಒಯ್ಯುತ್ತೇವೆ. ಅಕ್ರಮ ಏನು? ತಪ್ಪು ಏನೆಂದು ತಿಳಿಸಿದ್ದೇವೆ. ಜೊತೆಗೆ ದಾಖಲೆ ಸಹಿತವಾಗಿ ತಪ್ಪಿನ ಮಾಹಿತಿ ನೀಡಿದ್ದು, ನಾಗರಿಕರು, ಗ್ರಾಹಕರ ಹಿತ ಕಾಪಾಡುವ ದೃಷ್ಟಿಯಿಂದ ಸಚಿವರಿಗೆ ಪತ್ರವನ್ನೂ ನೀಡುತ್ತಿದ್ದೇವೆ. ಹಾಗಾಗಿ ಈ ಪತ್ರಕ್ಕೆ ಸಚಿವರು ಶೀಘ್ರವೇ ಉತ್ತರಿಸಬೇಕು ಎಂದು ಒತ್ತಾಯಿಸಿದರು.