ಬೆಂಗಳೂರು: ಕಾಶ್ಮೀರ ಭಾರತದ ಅಂಗವಾಗಿದ್ದು, ಅದನ್ನು ಯಾರಿಂದಲೂ ಬೇರ್ಪಡಿಸಲು ಸಾಧ್ಯವಿಲ್ಲ ಎಂದು ಮಾಜಿ ಕೇಂದ್ರ ಸಚಿವ ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಿನ ಪರಿಸ್ಥಿತಿಯಲ್ಲಿ ಯಾವ ಯುದ್ಧವೂ ಆಗುವುದಿಲ್ಲ. ಯುದ್ಧ ಮಾಡಲು ಇಬ್ಬರೂ ತಯಾರಿಲ್ಲ. ಒಂದು ವೇಳೆ ಯುದ್ಧವಾದರೆ ಇಬ್ಬರಿಗೂ ನಷ್ಟವಾಗಲಿದ್ದು, ಶಾಂತಿಯುತವಾಗಿ ಬಗೆಹರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ನಾವು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಂಪೂರ್ಣ ಬೆಂಬಲ ನೀಡುತ್ತೇವೆ. ನಾವೆಲ್ಲರೂ ಭಾರತೀಯರು. ಈ ದೇಶ ಸರ್ವಧರ್ಮ ಸಮನ್ವಯದ ನಾಡು. ಇಲ್ಲಿ ಯಾಕೆ ಗೊಂದಲ ಸೃಷ್ಟಿ ಮಾಡಬೇಕು ಎಂದು ಹೇಳಿದರು.
ಇದನ್ನೂ ಓದಿ:- ಪಾಕಿಸ್ತಾನ ವಿರುದ್ಧ ಯುದ್ಧ ಆಗಲೇಬೇಕು: ಸಚಿವ ಎಂ.ಬಿ.ಪಾಟೀಲ್
ಇನ್ನು ಜಾತಿ ಜನಗಣತಿ ವರದಿ ಗೊಂದಲ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಜಾತಿ ಜನಗಣತಿ ಬಗ್ಗೆ ಯಾಕೆ ತಲೆಕೆಡಿಸಿಕೊಂಡಿದ್ದಾರೆ. ದಲಿತರಿಗೆ ಮಾತ್ರ ಮೀಸಲಾತಿ ಇದೆ. ಹಿಂದುಳಿದ, ಅಲ್ಪಸಂಖ್ಯಾತರಿಗೆ ಏನೂ ಇಲ್ಲ. ಈ ಹಿಂದೆಯೇ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಸಮೀಕ್ಷೆಯಾಗಬೇಕಿತ್ತು. ನಾವು ಬಸವತತ್ವದವರು.ಎಲ್ಲರನ್ನು ಜೊತೆಗೆ ಕೊಂಡೊಯ್ಯುತ್ತೇವೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಹೇಳಬೇಕಿತ್ತು. ಹಿಂದೆ ಜನತಾದಳವಿದ್ದಾಗ ಮಂಡಲ್ ಕಮೀಷನ್ ತಂದು ಅಲ್ಪಸಂಖ್ಯಾತರಿಗೆ ಶೇ.4ರಷ್ಟು ಮೀಸಲಾತಿ ಕೊಡಲಾಯಿತು ಎಂದು ತಿಳಿಸಿದರು.
ಎರಡು ತಿಂಗಳಲ್ಲಿ ಹೊಸ ಪಕ್ಷ: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಒಳ್ಳೆಯ ಆರೋಗ್ಯ ಕೊಡಲಿ. ಅವರ ಆರೋಗ್ಯ ಹೇಗಿದೆ ಎಂದು ವಿಚಾರಿಸಿದ್ದೆ ಎಂದ ಅವರು, ಎರಡು ತಿಂಗಳಲ್ಲಿ ಹೊಸ ಪಕ್ಷ ಘೋಷಿಸುತ್ತೇವೆ. ಸಮಾನಸ್ಕರೆಲ್ಲರೂ ಸೇರಿ ಪ್ರಾದೇಶಿಕ ಪಕ್ಷ ಸ್ಥಾಪನೆಗೆ ಹೊರಟಿದ್ದೇವೆ. ಪಕ್ಷ ಸಂಘಟನೆಗಾಗಿ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೇವೆ ಎಂದರು. ಜೆಡಿಎಸ್ ಗೆದ್ದ ಕಡೆ ಮುಸ್ಲಿಮರ ಮತಗಳು ದೊರೆತಿವೆ. ಇನ್ನು ಮುಂದೆ ರಾಜ್ಯದಲ್ಲಿ ಜೆಡಿಎಸ್ ಭವಿಷ್ಯ ಕಷ್ಟ. ಜೆಡಿಎಸ್‍ಗೆ ಬಿಜೆಪಿ ಭಾರವಾಗಿದೆ. ಬಿಜೆಪಿಯವರಿಗೆ ಜೆಡಿಎಸ್ ಭಾರವಾಗಿದೆ ಎಂದು ಟೀಕಿಸಿದರು.





