ಬೆಂಗಳೂರು : ಖ್ಯಾತ ಉದ್ಯಮಿ ಮತ್ತು ಕಾನ್ಛಿಡೆಂಟ್ ಗ್ರೂಪ್ ಮಾಲೀಕ ಸಿ.ಜೆ.ರಾಯ್ ಅವರ ಆತ್ಮಹತ್ಯೆ ಪ್ರಕರಣ ಕ್ಷಣ ಕ್ಷಣಕ್ಕೂ ಹೊಸ ತಿರುವು ಪಡೆಯುತ್ತಿದೆ. ಐಟಿ ಅಧಿಕಾರಿಗಳ ವಿಚಾರಣೆ ವೇಳೆ ತಮ್ಮ ಕಚೇರಿಯಲ್ಲಿಯೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಡಿಕೊಂಡ ರಾಯ್ ಅವರ ಡೈರಿ (ದಿನಚರಿ ಪುಸ್ತಕ) ಈಗ ಪೊಲೀಸರ ತನಿಖೆಯ ಪ್ರಮುಖ ಭಾಗವಾಗಿದೆ. ಡೈರಿಯಲ್ಲಿ ಅವರು ಪ್ರಭಾವಿ ಶಾಸಕರ, ಚಿತ್ರ ರಂಗದ ಗಣ್ಯರ ಹೆಸರುಗಳನ್ನು ಉಲ್ಲೇಖಿಸಿರುವುದು ಗೊತ್ತಾಗಿದೆ.
ಕಾನ್ಛಿಡೆಂಟ್ ಗ್ರೂಪ್‌ನ ಅಧ್ಯಕ್ಷ ಸಿ.ಜೆ.ರಾಯ್ ಅವರ ಆತ್ಮಹತ್ಯೆ ಪ್ರಕರಣ ಉದ್ಯಮ ವಲಯದಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದೆ. ಈ ಪ್ರಕರಣದ ತನಿಖೆಯಲ್ಲಿ ಈಗ ರಾಯ್ ಅವರ ವೈಯಕ್ತಿಕ ಡೈರಿ ಪೊಲೀಸರಿಗೆ ಪ್ರಮುಖ ಸುಳಿವಾಗಿ ಪರಿಣಮಿಸಿದೆ. ಇದರಲ್ಲಿ ಪ್ರಮುಖ ವಿಚಾರಗಳನ್ನು ಬರೆದಿಟ್ಟಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಖ್ಯಾತ ಉದ್ಯಮಿ ಸಿ.ಜೆ.ರಾಯ್ ಅವರಿಗೆ ಪ್ರತಿದಿನ ಡೈರಿ ಬರೆಯುವ ಅಭ್ಯಾಸವಿತ್ತು ಎನ್ನಲಾಗಿದ್ದು, ಆ ದಿನಚರಿಯಲ್ಲಿ ಹಲವು ರಾಜಕೀಯ ಹಾಗೂ ಸಿನಿಮಾ ರಂಗದ ಗಣ್ಯರ ಕುರಿತು ಉಲ್ಲೇಖಗಳಿರುವುದಾಗಿ ಮೂಲಗಳು ತಿಳಿಸಿವೆ. ಡೈರಿಯಲ್ಲಿ ರಾಜ್ಯದ ಇಬ್ಬರು ಪ್ರಭಾವಿ ಶಾಸಕರು ಮತ್ತು ಒಬ್ಬ ಮಾಜಿ ಸಂಸದರ ಹೆಸರುಗಳು ಕಾಣಿಸಿಕೊಂಡಿರುವುದು ಪೊಲೀಸರ ಗಮನ ಸೆಳೆದಿದೆ ಎಂದು ಹೇಳಲಾಗುತ್ತಿದೆ.
ತಮ್ಮ ಕಂಪೆನಿಯ ಕಾರ್ಯಕ್ರಮಗಳಿಗೆ ಅವರನ್ನು ಕರೆಸುತ್ತಿದ್ದರು ಎಂದು ಮಾಹಿತಿ ಇದೆ. ಕೇರಳದಲ್ಲಿ ೧೬ ಪ್ರಾಜೆಕ್ಟ್‌ಗಳು ನಡೆಯುತ್ತಿದ್ದವು. ಈ ಪ್ರಾಜೆಕ್ಟ್‌ಗಳಿಗೆ ಸಂಬಂಧಿಸಿ ಹಲವು ಈವೆಂಟ್‌ಗಳನ್ನು ಆಯೋಜಿಸಿದ್ದರು. ಈ ಈವೆಂಟ್‌ಗಳಿಗೆ ನಟಿಯರು, ಮಾಡೆಲ್‌ಗಳು ಮತ್ತು ರಾಜಕಾರಣಿಗಳನ್ನು ಆಹ್ವಾನಿಸುತ್ತಿದ್ದರು. ಆದರೆ ಡೈರಿಯಲ್ಲಿ ಹೆಸರುಗಳನ್ನು ಏಕೆ ಬರೆದಿದ್ದರು? ಬರೀ ಈವೆಂಟ್ ವಿಚಾರಕ್ಕೆಯಾ ಅಥವಾ ಬೇರೆ ಕಾರಣವೇ? ಎಂಬುದರ ಬಗ್ಗೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ.
ಯಾರ ಹೆಸರುಗಳು ಉಲ್ಲೇಖ?
ವಿಶೇಷವಾಗಿ ಬೆಂಗಳೂರಿನ ಒಬ್ಬ ಪ್ರಭಾವಿ ಶಾಸಕ ಮತ್ತು ಕೋಲಾರ ಜಿಲ್ಲೆಯ ಶಾಸಕರೊಂದಿಗೆ ನಡೆದಿದ್ದ ವ್ಯಾವಹಾರಿಕ ಸಂಪರ್ಕಗಳ ಕುರಿತು ವಿವರಗಳು ದಾಖಲಾಗಿವೆ ಎನ್ನಲಾಗಿದೆ. ಜೊತೆಗೆ, ದಕ್ಷಿಣ ಭಾರತದ ಖ್ಯಾತ ನಟಿ ಹಾಗೂ ಮಾಡೆಲ್‌ಗಳ ಹೆಸರುಗಳೂ ಡೈರಿಯಲ್ಲಿ ಉಲ್ಲೇಖವಾಗಿರುವ ಮಾಹಿತಿ ಲಭ್ಯವಾಗಿದೆ.
ಇದಲ್ಲದೆ, ರಾಯ್ ಅವರು ದುಬೈನಲ್ಲಿ ನಡೆಸುತ್ತಿದ್ದ ವ್ಯವಹಾರಗಳು, ಅಲ್ಲಿನ ಪ್ರಭಾವಿ ವ್ಯಕ್ತಿಗಳೊಂದಿಗೆ ಹೊಂದಿದ್ದ ಸಂಪರ್ಕಗಳ ಕುರಿತು ಕೂಡ ಡೈರಿಯಲ್ಲಿ ಬರೆಯಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಎಲ್ಲಾ ಅಂಶಗಳನ್ನು ಪೊಲೀಸರು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದು, ಡೈರಿಯಲ್ಲಿರುವ ಮಾಹಿತಿಯ ಆಧಾರದಲ್ಲಿ ತನಿಖೆ ಮುಂದುವರಿದಿದೆ ಎನ್ನಲಾಗಿದೆ.




