ಬೆಂಗಳೂರು : ಮೈಸೂರು ಮುಡಾ ಹಗರಣಕ್ಕೆ ಸಂಬಂಧಪಟ್ಟಂತಹ ಕಡತಗಳನ್ನ ತೆಗೆದುಕೊಂಡು ಬೆಂಗಳೂರಿಗೆ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಓಡಿಬಂದಿದ್ದಾರೆ ಎಂದು ಬಿ.ವೈ ವಿಜಯೇಂದ್ರ ಆರೋಪಿಸಿದರು.
ವಾಲ್ಮೀಕಿ ಹಗರಣ ಹಾಗೂ ಮುಡಾ ಹಗರಣ ಕುರಿತು ವಿರೋಧ ಪಕ್ಷದ ನಾಯಕ ಆರ್ ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕುವ ಪ್ರಯತ್ನ ಮಾಡಿದರು.
ಈ ಸಂದರ್ಭ ಮಾಧ್ಯಮದವರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ಮೈಸೂರಿನಲ್ಲಿ ಸಿಎಂ ಪತ್ನಿಗೆ ೧೫ ಸೈಟುಗಳನ್ನ ಹಂಚಲಾಗಿದೆ. ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಮುಡಾ ಕಚೇರಿಗೆ ತೆರಳಿ ತರಾತುರಿಯಲ್ಲಿ ಅಧಿಕಾರಿಗಳನ್ನು ಟ್ಯಾನ್ಸ್ ಫರ್ ಮಾಡಿ ಹಗರಣಕ್ಕೆ ಸಂಬಂಧಿಸಿದ ಕಡತಗಳನ್ನು ತೆಗೆದುಕೊಂಡು ಬೆಂಗಳೂರಿಗೆ ಬಂದಿದ್ದಾರೆ ಎಂದು ಹೇಳಿದರು.
ಸುಳ್ಳು ಆಶ್ವಾಸನೆಗಳನ್ನ ನೀಡಿ ಅಧಿಕಾರಕ್ಕೆ ಬಂದ ಭಂಡ ಸರ್ಕಾರದ ಬಣ್ಣ ಬಯಲಾಗಿದೆ ಮತ್ತು ದಿನಕ್ಕೊಂದು ಹಗರಣ ಹೊರಬೀಳುತ್ತಿದೆ. ಹಗರಣಗಳು ಸಿಎಂ ಗಮನಕ್ಕೆ ಬಾರದೆ ನಡೆದಿರುವುದಿಲ್ಲ. ಸರ್ಕಾರದ ಹಗರಣಗಳ ಹಿನ್ನೆಲೆಯಲ್ಲಿ ಪ್ರತಿಭಟನೆ ಮಾಡುತ್ತ ಸಿಎಂ ಮನೆಗೆ ಮುತ್ತಿಗೆ ಹಾಕುವ ಪ್ರಯತ್ನ ಮಾಡಿದ್ರೆ ನಮ್ಮ ಹಕ್ಕನು ಹತ್ತಿಕ್ಕಲಾಗುತ್ತದೆ ಎಂದರು.