ಬೆಂಗಳೂರು: ಶಾಸಕರಾದ ಎಸ್.ಟಿ.ಸೋಮಶೇಖರ್ ಹಾಗೂ ಶಿವರಾಮ್ ಹೆಬ್ಬಾರ್ ಅವರನ್ನು ಬಿಜೆಪಿಯಿಂದ ಉಚ್ಛಾಟನೆಗೊಂಡಿರುವ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.
ಪಕ್ಷ ವಿರೋಧಿ ಕೆಲಸ ಮಾಡುತ್ತಿದ್ದ ಆರೋಪದಡಿ ಶಾಸಕರಾದ ಶಿವರಾಮ್ ಹೆಬ್ಬಾರ್ ಹಾಗೂ ಎಸ್.ಟಿ.ಸೋಮಶೇಖರ್ ಅವರನ್ನು ಆರು ವರ್ಷಗಳ ಕಾಲ ಬಿಜೆಪಿಯಿಂದ ಉಚ್ಛಾಟನೆ ಮಾಡಲಾಗಿದೆ.
ಇದನ್ನೂ ಓದಿ:- ಮುತ್ತು ರತ್ನಗಳನ್ನೆಲ್ಲಾ ನೀವೇ ಇಟ್ಟುಕೊಳ್ಳಿ: ಬಿಜೆಪಿ ಶಾಸಕರ ಉಚ್ಛಾಟನೆಗೆ ಡಿಕೆಶಿ ಟಾಂಗ್
ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು, ಪಕ್ಷ ವಿರೋಧಿ ಕೆಲಸ ಮಾಡಿದ್ದ ಪರಿಣಾಮ ಅವರಿಬ್ಬರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ಬಿಜೆಪಿ ಪಕ್ಷ ಅಧಿಕಾರದಲ್ಲಿದ್ದಾಗ ಅವರಿಬ್ಬರೂ ಚೆನ್ನಾಗಿ ಅಧಿಕಾರಿ ಅನುಭವಿಸಿದ್ರು. ಈಗ ವಿಪಕ್ಷದಲ್ಲಿ ಕೂರಲು ಕಷ್ಟ ಆಯ್ತು ಅನ್ಸುತ್ತೆ. ಹಾಗಾಗಿ ಪಕ್ಷದ ವಿರುದ್ಧ ದಿನೇ ದಿನೇ ಇಲ್ಲಸಲ್ಲದ ಆರೋಪ ಮಾಡುತ್ತಾ, ಕಾಂಗ್ರೆಸ್ ನಾಯಕರ ಜೊತೆ ಗುರುತಿಸಿಕೊಂಡಿದ್ದರು. ಹೀಗಾಗಿ ಹೈಕಮಾಂಡ್ ಸರಿಯಾದ ತೀರ್ಮಾನ ಕೈಗೊಂಡಿದೆ ಎಂದರು.
ಇನ್ನು ಬಿಜೆಪಿ ಶಾಸಕರ ಉಚ್ಛಾಟನೆ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ನಮ್ಮ ಪಕ್ಷದ ತೀರ್ಮಾನಕ್ಕೆ ಡಿಕೆಶಿ ಅವರು ನೋವು ಪಡುವ ಅಗತ್ಯವಿಲ್ಲ. ಅವರಿಬ್ಬರು ಪಕ್ಷ ವಿರೋಧಿ ಕೆಲಸ ಮಾಡಿದ್ದ ಬಗ್ಗೆ ಡಿಕೆಶಿಗೂ ಗೊತ್ತು ಎಂದರು.




