Mysore
30
clear sky

Social Media

ಸೋಮವಾರ, 08 ಡಿಸೆಂಬರ್ 2025
Light
Dark

ಅಧಿಕಾರ ದಾಹದಿಂದ ಪಾದಯಾತ್ರೆ ಹಮ್ಮಿಕೊಂಡಿಲ್ಲ: ವಿಜಯೇಂದ್ರ

ಬೆಂಗಳೂರು: ರಾಜ್ಯದ ಇತಿಹಾಸದಲ್ಲಿ ಇಂಥ ಬೃಹತ್ ಪಾದಯಾತ್ರೆಯನ್ನು ಯಾರೂ ಹಮ್ಮಿಕೊಂಡಿರಲಿಲ್ಲ. ಯಾವುದೇ ಅಧಿಕಾರ ದಾಹದಿಂದ ನಾವು ಈ ಪಾದಯಾತ್ರೆ ಹಮ್ಮಿಕೊಂಡಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ತಿಳಿಸಿದರು.

ನಾಲ್ಕನೇ ದಿನವಾದ ಇಂದು ಮೈಸೂರು ಚಲೋ ಪಾದಯಾತ್ರೆಯ ಸಂದರ್ಭದಲ್ಲಿ ಅವರು ಮಾತನಾಡಿದರು. ಭ್ರಷ್ಟ ಕಾಂಗ್ರೆಸ್ ಸರ್ಕಾರ ಮತ್ತು ಭ್ರಷ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕಿತ್ತೆಸೆಯಬೇಕೆಂಬ ಸಂಕಲ್ಪದೊಂದಿಗೆ ಈ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.

ರಾಜ್ಯದ ಆರೂವರೆ ಕೋಟಿ ಜನರಿಗೆ ಚುನಾಯಿತ ಸರ್ಕಾರ ಇದೆ ಎಂದು ಅನಿಸುತ್ತಿಲ್ಲ. ಕಾಂಗ್ರೆಸ್‌ನವರು ಅನೇಕ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದಿದ್ದಾರೆ. ಕಳೆದ 14 ತಿಂಗಳಿನಲ್ಲಿ ರಾಜ್ಯದಲ್ಲಿ ವಿದ್ಯುತ್ ದರ, ಹಾಲಿನ ದರ ಹೆಚ್ಚಿಸಿದರೂ ಅದರ ಪ್ರಯೋಜನ ರೈತರು, ಹೈನುಗಾರರಿಗೆ ಲಭಿಸಿಲ್ಲ. ಯಡಿಯೂರಪ್ಪನವರು, ಬಿಜೆಪಿ ಸರ್ಕಾರವು ಹಾಲು ಉತ್ಪಾದಕರಿಗೆ 5 ರೂ. ಪ್ರೋತ್ಸಾಹಧನ ಕೊಡುತ್ತಿತ್ತು ಎಂದು ವಿವರಿಸಿದರು.

ಸಿದ್ದರಾಮಯ್ಯನವರು ರೈತರ ಬಗ್ಗೆ ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ. ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ 1200 ಕೋಟಿ ರೂ. ಹಾಗೇ ಉಳಿಸಿಕೊಂಡಿದ್ದಾರೆ. ನೋಂದಣಿ ಶುಲ್ಕ ಹೆಚ್ಚಾಗಿದೆ. ಅಕ್ಕಿ, ದವಸ ಧಾನ್ಯವೂ ದುಬಾರಿಯಾಗಿದೆ. 1 ಲಕ್ಷ 95 ಸಾವಿರ ಕೋಟಿ ಸಾಲವನ್ನು ಸಿದ್ದರಾಮಯ್ಯನವರ ಸರ್ಕಾರ ಮಾಡಿದೆ ಎಂದು ಟೀಕಿಸಿದರು.

ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ವಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್.ಎಸ್. ಇಂದ್ರೇಶ್ ಕುಮಾರ್, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್ ಬಾಬು, ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಸಂಸದರು, ಶಾಸಕರು, ಮಾಜಿ ಜನಪ್ರತಿನಿಧಿಗಳು, ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಇದ್ದರು.

Tags:
error: Content is protected !!