ಶಿವಮೊಗ್ಗ: ಏನಾದರೂ ನೋವಾಗಿದ್ದರೆ ದಯವಿಟ್ಟು ಮರೆತು ಪಕ್ಷಕ್ಕೆ ಸಹಕಾರ ನೀಡಬೇಕು ಎಂದು ಕೆ.ಎಸ್. ಈಶ್ವರಪ್ಪ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮನವಿ ಮಾಡಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಮ್ಮಲ್ಲಿ ಕೈ ಮುಗಿದು ಕೇಳಿಕೊಳ್ಳುತ್ತೇನೆ, ಏನಾದರೂ ನೋವಾಗಿದ್ದರೆ ದಯವಿಟ್ಟು ಮರೆತು ಪಕ್ಷಕ್ಕೆ ಸಹಕಾರ ನೀಡಿ, ಬಿಜೆಪಿ ಹಿತದೃಷ್ಟಿಯಿಂದ ನಮ್ಮೊಂದಿಗೆ ಕೈ ಜೋಡಿಸಿ ಎಂದು ಮನವಿ ಮಾಡಿದ್ದಾರೆ.
ಮತ್ತೊಮ್ಮೆ ಮೋದಿ ಎಂಬುದು ನಮ್ಮ ಆಶಯ, ಹೀಗಾಗಿ ಈಶ್ವರಪ್ಪ ಅವರು ಬೆಂಬಲ ನೀಡಿ ರಾಘವೇಂದ್ರನನ್ನು ಗೆಲ್ಲಿಸಬೇಕು. ರಾಜ್ಯದಲ್ಲಿ ನಮ್ಮ ನಿರೀಕ್ಷೆಗೆ ಮೀರಿ ಬಿಜೆಪಿ ಪರ ಒಲವು ಕಾಣುತ್ತಿದೆ. ಮೋದಿ ಜನಪ್ರಿಯತೆ ದಿನೇ ದಿನೆ ಹೆಚ್ಚಾಗುತ್ತಿದ್ದು,ಕಾಂಗ್ರೆಸ್ ಪಕ್ಷವನ್ನ ನಿದ್ದೆಗೆಡಿಸಿದೆ. ರಾಜ್ಯದಲ್ಲಿ ಬಿಜೆಪಿಗೆ 28 ಸ್ಥಾನ ಬರುತ್ತವೆ. ಇದರಲ್ಲಿ ಯಾವುದೇ ಅನುಮಾನ ಇಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗೆದ್ದರೆ ಪ್ರಪಂಚದಲ್ಲಿ 8 ನೇ ಅದ್ಬುತವಾಗಲಿದೆ ಎಂದರು.
ಕೇಂದ್ರ ಸರ್ಕಾರದ ಯೋಜನೆ ರಾಜ್ಯದ ಜನರಿಗೆ ಸಿಗಬಾರದು ಎಂದು ರಾಜ್ಯ ಸರ್ಕಾರ ದುರುದ್ದೇಶದ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು.





