ಬೆಂಗಳೂರು : ಬಳ್ಳಾರಿ ಘಟನೆಯಲ್ಲಿ ಕಾಂಗ್ರೆಸ್ ಪಕ್ಷ ಶಾಸಕ ನ.ರಾ.ಭರತ್ ರೆಡ್ಡಿ ಪರವಾಗಿ ನಿಲ್ಲಲಿದೆ. ಚುನಾವಣೆಗಳ ಸೋಲಿನಿಂದ ಹತಾಶೆಗೊಂಡಿರುವ ಶಾಸಕ ಜನಾರ್ದನ ರೆಡ್ಡಿ ಮತ್ತೆ ರಿಪಬ್ಲಿಕ್ ಬಳ್ಳಾರಿ ಮಾಡಲು ಯತ್ನಿಸುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.
ಮುಖ್ಯಮಂತ್ರಿಯವರ ಗೃಹ ಕಚೇರಿ ಕೃಷ್ಣದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರಿಗೆ ಸೋಲನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸೋಲಿನ ಬಳಿಕ ಜನಾರ್ದನ ರೆಡ್ಡಿ ಮತ್ತು ಶ್ರಿ?ರಾಮುಲು ಒಬ್ಬರನ್ನೊಬ್ಬರು ತಬ್ಬಿಕೊಂಡು ಓಡಾಡುತ್ತಿದ್ದಾರೆ. ಅದು ಅವರ ಇಷ್ಟ ನಮಗೇನು ತೊಂದರೆ ಇಲ್ಲ. ಆದರೆ ಬಳ್ಳಾರಿಯನ್ನು ಮತ್ತೆ ರಿಪಬ್ಲಿಕ್ ಮಾಡಲು ನಾವು ಅವಕಾಶ ನೀಡುವುದಿಲ್ಲ. ನಮ ಶಾಸಕರು ಹಾಗೂ ಕಾರ್ಯಕರ್ತರನ್ನು ನಿಯಂತ್ರಣದಲ್ಲಿ ಇಡಲು ಮುಖ್ಯಮಂತ್ರಿಯವರು ಈಗಾಗಲೇ ಎಲ್ಲಾ ಸೂಚನೆಗಳನ್ನು ನೀಡಿದ್ದಾರೆ ಎಂದರು.
ಜನಾರ್ದನ ರೆಡ್ಡಿ ಬಳ್ಳಾರಿಯಲ್ಲಿ ಇಲ್ಲದೆ ಇರುವಾಗ ಯಾವ ಗಲಾಟೆಗಳು ಇರಲಿಲ್ಲ. ಒಂದು ಎಫ್‍ಐಆರ್ ಕೂಡ ದಾಖಲಾಗಿರಲಿಲ್ಲ. ಅವರು ಬಳ್ಳಾರಿಗೆ ಬಂದ ಮೇಲೆ ಪರಿಸ್ಥಿತಿ ಹದಗೆಡುತ್ತಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಪಕ್ಷ ಶಾಸಕ ಭರತ್ ರೆಡ್ಡಿ ಅವರ ಜೊತೆಯಾಗಿದೆ. ಶಾಂತಿ ಪಾಲನೆಗಾಗಿ ಅವರು ಸ್ಥಳಕ್ಕೆ ಹೋಗಿದ್ದರು. ಗುಂಡು ಹಾರಿಸಿದ್ದು ಯಾರು ಎಂದು ತನಿಖೆಯಿಂದ ತಿಳಿದು ಬರಲಿದೆ ಎಂದರು.
ಖಾಸಗಿ ವ್ಯಕ್ತಿಗಳ ಬಂದೂಕುಗಳಿಗೆ ಕಡಿವಾಣ
ಖಾಸಗಿ ವ್ಯಕ್ತಿಗಳ ಬಂದೂಕುಗಳನ್ನು ಜಪ್ತಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಖಾಸಗಿ ವ್ಯಕ್ತಿಗಳ ಭದ್ರತೆಗೆ ಬಂದೂಕು ಒದಗಿಸುವ ಬಗ್ಗೆ ಕಠಿಣ ನಿಯಮಗಳನ್ನು ರೂಪಿಸಲಾಗುವುದು. ಖಾಸಗಿ ಬಂದೂಕಿನಿಂದ ಗುಂಡು ಸಿಡಿದು ಜೀವ ಹಾನಿಯಾಗಿರುವ ಪ್ರಕರಣದಲ್ಲಿ ಇದು ಎರಡನೇ ದುರ್ಘಟನೆ. ಮುಂದಿನ ದಿನಗಳಲ್ಲಿ ಖಾಸಗಿ ವ್ಯಕ್ತಿಗಳ ಬಂದೂಕುಗಳ ದುರುಪಯೋಗಕ್ಕೆ ಕಡಿವಾಣ ಹಾಕಲಾಗುವುದು ಎಂದು ಹೇಳಿದರು.
ಎಸ್‌ಪಿ ಯಾವ ಶೈಲಿಯಲ್ಲಿ ಉತ್ತರ ನೀಡಿದ್ದಾರೆ ಗೊತ್ತಿದೆ
ಗಲಾಟೆಯಾದಾಗ ಸ್ಥಳದಲ್ಲಿ ಶಾಸಕ ಭರತ್ ರೆಡ್ಡಿ ಇರಲಿಲ್ಲ. ಮನೆ ಮುಂದೆ ಪೊಸ್ಟರ್ ಹಾಕಬಾರದು ಎಂದು ಗಲಾಟೆ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು, ಕಾನೂನು ತನ್ನದೇ ಆದ ಕ್ರಮಗಳ ಕೈಗೊಳ್ಳುತ್ತದೆ. ಗಲಾಟೆಯಾದ ತಕ್ಷಣ ನಾನೇ ಖುದ್ದಾಗಿ ನನ್ನ ಫೋನ್ ಮೂಲಕ ಅಲ್ಲಿನ ಎಸ್ಪಿ ಅವರಿಗೆ ಮಾತನಾಡಿದ್ದೇನೆ. ಆತ ಯಾವ ಶೈಲಿಯಲ್ಲಿ ಉತ್ತರ ನೀಡಿದ್ದಾನೆ ಎಂದು ಗೊತ್ತಿದೆ. ಆ ಸಂದರ್ಭದಲ್ಲಿ ಶ್ರೀರಾಮುಲು ಕೂಡ ನನಗೆ ಕರೆ ಮಾಡಿದ್ದರು. ಪಕ್ಷ ಯಾವುದೇ ಇದ್ದರೂ ಕಾನೂನು ವ್ಯವಸ್ಥೆ ಮುಖ್ಯ ಎಂದು ತಕ್ಷಣವೇ ಪೊಲೀಸರಿಗೆ ಕರೆ ಮಾಡಿದ್ದೆ. ನಮ ಪಕ್ಷದ ಶಾಸಕ ಭರತ್ ರೆಡ್ಡಿಗೂ ಕೂಡ ಮಾತನಾಡಿದ್ದಾಗಿ ಹೇಳಿದರು.
ಆತ ಡ್ರಾಮಾ ಮಾಸ್ಟರ್
ಜನಾರ್ದನ ರೆಡ್ಡಿ ಡ್ರಾಮಾ ಮಾಸ್ಟರ್, ಸಿನಿಮಾ ನಿರ್ಮಾಪಕ. ನೂರು ಜನ ಭದ್ರತಾ ಸಿಬ್ಬಂದಿಗಳನ್ನು ಇಟ್ಟುಕೊಂಡು, ಕೋಟೆ ಕಟ್ಟಿಕೊಂಡಿರುವ ಅವರನ್ನು ಕೊಲ್ಲಲು ಯಾರು ಹೋಗುತ್ತಾರೆ. ಕುಟುಂಬದವರ ವಿಧಾನಸಭೆ ಸೋಲನ್ನು ಆರಗಿಸಿಕೊಳ್ಳಲಾಗುತ್ತಿಲ್ಲ. ಅದಕ್ಕಾಗಿ ಭರತರೆಡ್ಡಿ ವಿರುದ್ಧ ಕೊಲೆ ಯತ್ನದ ಆರೋಪ ಮಾಡುತ್ತಿದ್ದಾರೆ. ಕೊಲೆಗಳ ಇತಿಹಾಸ ಯಾರಿಗಿದೆ ಎಂದು ಜನ ಅರ್ಥಮಾಡಿಕೊಳ್ಳುತ್ತಾರೆ ಎಂದರು.





