ಬೆಂಗಳೂರು/ಮೈಸೂರು: ಮದುವೆ ದಿನವೇ ವರ ಹಾಗೂ ಆತನ ಕುಟುಂಬಸ್ಥರು ಮಂಟಪದಿಂದ ಪರಾರಿಯಾಗಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.
ಮೈಸೂರಿನ ಪ್ರೇಮ್‌ಚಂದ್ ಎಂಬಾತನೇ ಪರಾರಿಯಾಗಿರುವ ವರನಾಗಿದ್ದು, ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಮೈಸೂರಿನ ಕೇಂದ್ರೀಯ ವಿದ್ಯಾಲಯದಲ್ಲಿ ಯುವಕ ಹಾಗೂ ಸಂತ್ರಸ್ತೆ ಇಬ್ಬರು ಒಳ್ಳೆಯ ಸ್ನೇಹಿತರಾಗಿದ್ದರು. ಇಬ್ಬರ ನಡುವೆಯೂ ಸ್ನೇಹವಾಗಿತ್ತು. ಸಂತ್ರಸ್ತೆ ಬಿಇ ಬಳಿಕ ಎಂಎಸ್ ಮುಗಿಸಿ ಫ್ರಾನ್ಸ್‌ನಲ್ಲಿ ಕೆಲಸಕ್ಕೆ ಸೇರಿದ್ದಳು. ಆರೋಪಿ ಪ್ರೇಮ್ ಕೂಡ ಪ್ಯಾರೀಸ್‌ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ. ಈ ವೇಳೆ ಇಬ್ಬರ ನಡುವೆ ಪ್ರೀತಿಯಾಗಿ ಪ್ಯಾರೀಸ್‌ನಲ್ಲಿ ಸುತ್ತಾಡಿಕೊಂಡಿದ್ದರು.
ಇಬ್ಬರು ಮನೆಯವರು ಒಪ್ಪಿಸಿ ಕಳೆದ ಜುಲೈನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಕುಟುಂಬಸ್ಥರೆಲ್ಲಾ ಸೇರಿ ಮಾರ್ಚ್.3ರಂದು ಪ್ರೇಮ್ ಹಾಗೂ ಸಂತ್ರಸ್ತೆಯ ಮದುವೆ ದಿನಾಂಕ ನಿಶ್ಚಯ ಮಾಡಿದ್ದರು.
ಮಾರ್ಚ್.1ರಂದು ಮೆಹೆಂದಿ ಹಾಗೂ ಹಳದಿ ಶಾಸ್ತ್ರ ನಡೆದಿತ್ತು. ಈ ವೇಳೆ ಪ್ರೇಮ್‌ಚಂದ್ ಮನೆಯವರು ಸಂತ್ರಸ್ತೆ ತಂದೆಯ ಬಳಿಯ 50 ಲಕ್ಷ ನಗದು, ಅರ್ಧ ಕೆಜಿ ಚಿನ್ನ ಹಾಗೂ ಬೆಂಜ್ ಕಾರು ನೀಡುವಂತೆ ಬೇಡಿಕೆಯಿಟ್ಟಿದ್ದರು.
ಈ ವೇಳೆ ಸಂತ್ರಸ್ತೆಯ ತಂದೆ ಇದನ್ನು ಕೊಡಲು ಆಗಲ್ಲ. ಮದುವೆಗೆಂದೇ 25 ಲಕ್ಷ ರೂ ಖರ್ಚಾಗಿದೆ ಎಂದು ಹೇಳಿದ್ದರು.
ಈ ವಿಚಾರ ತಿಳಿಯುತ್ತಿದ್ದಂತೆ ಪ್ರೇಮ್ ಹಾಗೂ ಆತನ ಕುಟುಂಬಸ್ಥರು ಮದುವೆ ಮಂಟಪದಿಂದ ಪರಾರಿಯಾಗಿದ್ದಾರೆ. ಘಟನೆ ನಡೆಯುತ್ತಿದ್ದಂತೆ ಸಂತ್ರಸ್ತೆ ತಂದೆ ಉಪ್ಪಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸಂತ್ರಸ್ತೆಯನ್ನು ಮದುವೆಗೂ ಮುನ್ನ ಬಲವಂತವಾಗಿ ಲೈಂಗಿಕವಾಗಿ ಬಳಸಿಕೊಂಡಿದ್ದಾನೆಂದು ಉಲ್ಲೇಖಿಸಿದ್ದಾರೆ.





