Mysore
20
overcast clouds
Light
Dark

‘ಬೊಮ್ಮಾಯಿ’ ನೇತೃತ್ವದ ಸರ್ಕಾರ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡಿದೆ : ನಮ್ಮ ಪಕ್ಷದ ಬಗ್ಗೆ ಮಾತನಾಡುವ ನೈತಿಕತೆ ಅವರಿಗಿಲ್ಲ: ಎಂ.ಬಿ.ಪಾಟೀಲ್‌

ಬೆಂಗಳೂರು: ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಬಿಜೆಪಿ ರಾಜ್ಯದಲ್ಲಿ ಹೀನಾಯವಾಗಿ ಸೋಲು ಕಂಡಿತು. ಹೀಗಿರುವಾಗ, ಲೋಕಸಭಾ ಚುನಾವಣೆ ಆದ ಮೇಲೆ ರಾಜ್ಯ ಸರ್ಕಾರ ಪತನವಾಗುತ್ತದೆ ಎಂದು ಹೇಳಲು ಅವರಿಗೆ ಯಾವ ನೈತಿಕತೆ ಇದೆ ಎಂದು ಭಾರಿ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ ಶುಕ್ರವಾರ ತಿರುಗೇಟು ನೀಡಿದರು.
ತಮ್ಮ ನಿವಾಸದಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಪಕ್ಷಕ್ಕೆ 135 ಸೀಟುಗಳು ಬಂದಿರುವುದರಲ್ಲಿ ಬೊಮ್ಮಾಯಿ ಅವರ ಕೊಡುಗೆಯೂ ಇದೆ ಎಂದರು.
ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದಾಗ ಬುದ್ಧಿವಂತರೊಬ್ಬರು ಆ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆಂದು ನಾವೂ ಖುಷಿಪಟ್ಟಿದ್ದೆವು. ಆದರೆ, ಅದನ್ನು ಉಳಿಸಿಕೊಳ್ಳಲು ಅವರಿಗೆ ಆಗಲಿಲ್ಲ ಎಂದು ಟೀಕಾಸ್ತ್ರ ಪ್ರಯೋಗಿಸಿದರು.
ಪ್ರತ್ಯೇಕ ರಾಷ್ಟ್ರ ದ ಬಗ್ಗೆ ಸಂಸದ ಡಿ.ಕೆ ಸುರೇಶ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, ದಕ್ಷಿಣದ ರಾಜ್ಯಗಳಿಗೆ ಆದಾಯಕ್ಕೆ ತಕ್ಕ ಪ್ರತಿಫಲ ಸಿಗಲಿ ಎಂಬುದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಅವರು ಹಾಗೆ ಹೇಳಿದ್ದಾರೆ  ಅದಕ್ಕೆ ಹೆಚ್ಚಿನ ಅರ್ಥಗಳನ್ನು ಕಲ್ಪಿಸುವ ಅಗತ್ಯವಿಲ್ಲ ಎಂದು ಸಮರ್ಥಿಸಿಕೊಂಡರು.
ನಿನ್ನೆ ಮುಖ್ಯಮಂತ್ರಿ ಅವರು ಡಿನ್ನರ್ ಪಾರ್ಟಿ ಕರೆದ ಸಂದರ್ಭದಲ್ಲಿ, ಜಿಲ್ಲೆಗಳ ಉಸ್ತುವಾರಿ ಸಚಿವರೊಂದಿಗೆ ಬರಲಿರುವ ಲೋಕಸಭಾ ಚುನಾವಣೆಗೆ ಸಜ್ಜಾಗುವುದು, ಪಕ್ಷ ಸಂಘಟನೆ ಮತ್ತಿತರ ವಿಷಯಗಳ ಕುರಿತು ಚರ್ಚೆಗಳು ನಡೆದಿವೆ ಎಂದು ಪಾಟೀಲ ತಿಳಿಸಿದರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ