ಬೆಂಗಳೂರು: ಬೆಳ್ಳಂಬೆಳಗ್ಗೆ ಶಾಲೆಗಳ ಮೇಲೆ ಬಾಂಬ್ ದಾಳಿ ಬೆದರಿಕೆ ಕರೆ ರಾಜ್ಯ ರಾಜಧಾನಿಯನ್ನು ಬೆಚ್ಚಿಬೀಳಿಸಿತ್ತು. ಇದೀಗ ಬೆದರಿಕೆ ಬಂದ ಶಾಲೆಗಳ ಸಂಖ್ಯೆ ಹೆಚ್ಚತ್ತಲೇ ಹೋಗುತ್ತಿದೆ.
ಪ್ರಾರಂಭದಲ್ಲಿ 15 ಶಾಲೆಗಳಿಗೆ ಇ-ಮೇಲ್ ಬಾಂಬ್ ಬೆದರಿಕೆ ಕರೆ ಬಂದಿತ್ತು. ಇದೀಗ 60 ಶಾಲೆಗಳಿಗೆ ಬೆದರಿಕೆ ಇ-ಮೇಲ್ ಬಂದಿದೆ. ಕ್ಷಣಕ್ಷಣಕ್ಕೂ ಶಾಲೆಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಇದರಿಂದಾಗಿ ಪೋಷಕರು ಮತ್ತು ಶಾಲೆಗಳ ಆಡಳಿತಮಂಡಳಿ ಆತಂಕಕ್ಕೆ ಒಳಗಾಗಿದ್ದಾರೆ.
ಬೆದರಿಕೆ ಕರೆ ಬಂದಿರುವ ಎಲ್ಲಾ ಶಾಲೆಗಳನ್ನು ಪರಿಶೀಲನೆ ಮಾಡುವಂತೆ ಪೊಲೀಸ್ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶಿಸಿದ್ದಾರೆ.ಈಗಾಗಲೇ ಬೆಂಗಳೂರಿನ ಬಹುತೇಕ ಶಾಲೆಗಳಿಗೆ ರಜೆ ನೀಡಲಾಗಿದೆ. ಪೋಷಕರಿಗೆ ಸಂದೇಶ ರವಾನೆ ಮಾಡಿರುವ ಶಾಲಾ ಆಡಳಿತಮಂಡಳಿ ಮಕ್ಕಳನ್ನು ಕರೆದುಕೊಂಡು ಹೋಗುವಂತೆ ತಿಳಿಸಿದ್ದಾರೆ.
ಸರ್ಕಾರಿ ಶಾಲೆ, ದೇವಾಲಯಕ್ಕೂ ಬಾಂಬ್ ಬೆದರಿಕೆ
ಕೇವಲ ಖಾಸಗಿ ಶಾಲೆಗಳಿಗೆ ಮಾತ್ರವಲ್ಲದೇ, ಸರ್ಕಾರಿ ಶಾಲೆಗಳಿಗೂ ಬಾಂಬ್ ದಾಳಿ ಮಾಡುವುದಾಗಿ ಬೆದರಿಕೆ ಕರೆ ಬಂದಿದೆ. ಇದಲ್ಲದೇ ಕೆಲವು ದೇವಾಲಯಗಳಿಗೂ ಬಾಂಬ್ ಬೆದರಿಕೆ ಇ-ಮೇಲ್ ಬಂದಿದೆ.
ಮೇಲ್ ಬಂದಿರುವ ಮೂಲಗಳನ್ನು ಪತ್ತೆಹಚ್ಚುತ್ತಿದ್ದೇವೆ. ಇದರ ಹಿಂದೆ ಯಾರ ಕೈವಾಡ ಇದೆ. ಯಾವ ಸಂಘಟನೆಗಳು ಒಳಗೊಂಡಿವೆ ಎಂದು ಪತ್ತೆ ಹಚ್ಚಲು ಪೊಲೀಸರಿಗೆ ತಿಳಿಸಿದ್ದೇನೆ. ಯಾವುದೇ ಅಹಿತಕರ ಘಟನೆ ಆಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.
-ಗೃಹ ಸಚಿವ ಡಾ.ಜಿ.ಪರಮೇಶ್ವರ್
ಶಾಂತಿ ಕದಡುವ ಕೆಲಸ ಮಾಡಿದ್ದಾರೆ. ಬೆದರಿಕೆ ಬಂದಿರುವ ಶಾಲೆಗಳಿಗೆ ಸೂಕ್ತ ಭದ್ರತೆ ನೀಡಲಾಗುತ್ತದೆ. ಸಹಜವಾಗಿ ಪೋಷಕರಲ್ಲಿ ಆತಂಕ ಮನೆ ಮಾಡಿರುತ್ತದೆ. ಆದರೆ ಪೋಷಕರು ಅನಗತ್ಯವಾಗಿ ಆತಂಕ ಪಡುವುದು ಬೇಡ.
– ಶಿಕ್ಷಣ ಸಚಿವ ಮಧುಬಂಗಾರಪ್ಪ
ಶಾಲೆಗಳಿಗೆ ಬಂದಿರುವ ಬಾಂಬ್ ಬೆದರಿಕೆ ಸುದ್ದಿ ಸುಳ್ಳಾಗಲಿ ಅಂತಾ ಪ್ರಾರ್ಥನೆ ಮಾಡುತ್ತೇನೆ. ಒಂದು ವೇಳೆ ನಿಜವಾದಲ್ಲಿ ಕರ್ನಾಟಕ ರಾಜ್ಯದಲ್ಲಿ ಭಯೋತ್ಪಾದಕ ಚಟುವಟಿಕೆಗೆ ಭಯ ಇಲ್ಲ ಎಂದು ತಿಳಿಯುತ್ತದೆ. ಸುದ್ದಿ ಹೊರ ಬಿಟ್ಟಿರುವ ಸಂಸ್ಥೆಯನ್ನು ಹುಡುಕಿ ಸರ್ಕಾರ ತುರ್ತು ಕ್ರಮ ತೆಗೆದುಕೊಳ್ಳಿ. ಬಾಂಬ್ ಇಡುವ ಪ್ರಯತ್ನ ನೇರ ರಾಷ್ಟ್ರದ್ರೋಹಿ ಕೆಲಸ.
– ಕೆ.ಎಸ್.ಈಶ್ವರಪ್ಪ