ಕಾಂಗ್ರೆಸ್ ನಿಗಮ ಮಂಡಳಿ ಇನ್ನೂ ಸಹ ಘೋಷಣೆಯಾಗಿಲ್ಲ. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಈ ಕುರಿತಾಗಿ ಹಲವು ಬಾರಿ ದೆಹಲಿಗೆ ತೆರಳಿದ್ದರೂ ಸಹ ಹೈಕಮಾಂಡ್‌ನಿಂದ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ.
ನಿಗಮ ಮಂಡಳಿ ನೇಮಕಾತಿ ಕುರಿತಾಗಿ ಪ್ರತಿಕ್ರಿಯಿಸಿದ ಗೃಹಸಚಿವ ಜಿ. ಪರಮೇಶ್ವರ್ ಮಂಡಳಿ ಮತ್ತು ನಿಗಮಗಳ ಅಧ್ಯಕ್ಷರ ನೇಮಕಕ್ಕೂ ಮುನ್ನ ತನ್ನ ಸಲಹೆ ಕೇಳಿಲ್ಲ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ನಿಗಮ ಮಂಡಳಿ ವಿಚಾರವಾಗಿ ಕಾಂಗ್ರೆಸ್ ನಾಯಕರಲ್ಲಿ ಅಸಮಾಧಾನವಿದೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿತ್ತು.
ಸದ್ಯ ಈ ವಿಚಾರವಾಗಿ ಮಾಧ್ಯಮದವರ ಜತೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲರ ಸಲಹೆಗಗೆ ಕಿವಿ ಕೊಡುವುದು ಕಷ್ಟ, ಅವರ ಜತೆ ಮಾತನಾಡಿದ್ದೇನೆ ಎಂದು ಹೇಳಿಕೆಯನ್ನು ನೀಡಿದರು. ನಿಗಮ ಮಂಡಳಿ ನೇಮಕಾತಿ ಬಗ್ಗೆ ನಾನು, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಚರ್ಚೆ ನಡೆಸಿ ಬಳಿಕ ಹೈಕಮಾಂಡ್ ಅನುಮೋದನೆಗಾಗಿ ಪಟ್ಟಿಯನ್ನು ಸುರ್ಜೇವಾಲಾ ಅವರಿಗೆ ನೀಡಲಾಗಿದೆ, ಪಟ್ಟಿಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರ ಸಹಿ ಆಗಬೇಕಿದೆ ಎಂದೂ ಸಹ ಸಿದ್ದರಾಮಯ್ಯ ತಿಳಿಸಿದರು.