Mysore
20
overcast clouds
Light
Dark

ಆರ್‌ಎಸ್‌ಎಸ್‌ ಸಮೀಕ್ಷೆಯಲ್ಲಿ ಬಿಜೆಪಿ 200ಸ್ಥಾನವನ್ನು ಗೆಲ್ಲುವುದಿಲ್ಲ: ಪ್ರಿಯಾಂಕ್‌ ಖರ್ಗೆ

ಬೆಂಗಳೂರು: ಆರ್‌ಎಸ್‌ಎಸ್‌ನ ಆಂತರಿಕ ಸಮೀಕ್ಷೆ ಪ್ರಕಾರ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 200 ಸ್ಥಾನಗಳನ್ನು ಸಹ ಗೆಲ್ಲುವುದಿಲ್ಲ ಮತ್ತು ರಾಜ್ಯದಲ್ಲಿ ಎಂಟು ಸ್ಥಾನಗಳನ್ನು ದಾಟುವುದಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಶನಿವಾರ(ಏ.೬) ಹೇಳಿದ್ದಾರೆ.

ಬರ ಪರಿಹಾರ ಕೋರಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುವಲ್ಲಿ ರಾಜ್ಯ ಸರ್ಕಾರದ ಕಡೆಯಿಂದ ವಿಳಂಬವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸುಳ್ಳು ಹೇಳಿದ್ದಾರೆ. ಅವರು ತಪ್ಪು ಮಾಹಿತಿಯ ಮಂತ್ರಿ ಆಗಿರಬೇಕು ಎಂದು ಟೀಕಿಸಿದ್ದಾರೆ.

ಆರ್‌ಎಸ್‌ಎಸ್‌ನ ಆಂತರಿಕ ಸಮೀಕ್ಷೆಯಲ್ಲಿ ಬಿಜೆಪಿಗೆ 200 ಸೀಟು ಬರುವುದಿಲ್ಲ ಎಂದು ಆರ್‌ಎಸ್‌ಎಸ್‌ ಹೇಳುತ್ತಿದೆ. ರಾಜ್ಯದಲ್ಲಿ ಬಿಜೆಪಿ ಎಂಟು ಸೀಟು ದಾಟುವುದಿಲ್ಲ. ಹದಿನಾಲ್ಕರಿಂದ ಹದಿನೈದು ಸೀಟುಗಳಲ್ಲಿ ಅವರು ಹೇಗೆ ಗೆಲ್ಲುತ್ತಾರೆ? ಎಂದು ಪ್ರಿಯಾಂಕ ಖರ್ಗೆ ಪ್ರಶ್ನಿಸಿದರು.

ಕೆಲವು ಬಿಜೆಪಿ ನಾಯಕರು ಒಂದು ಕುಟುಂಬದಿಂದ ರಾಜ್ಯದಲ್ಲಿ ಬಿಜೆಪಿ ಕಲುಷಿತವಾಗಿದೆ ಎಂದು ಹೇಳುತ್ತಿದ್ದಾರೆ, ಅವರು ಮೂಲ ಬಿಜೆಪಿಯನ್ನು ಮರುಸ್ಥಾಪಿಸಲು ಬಯಸುತ್ತಿರುವುದಾಗಿ ಹೇಳುತ್ತಿದ್ದಾರೆ. ನಾವು ಅದನ್ನು ಹೇಳುತ್ತೇವೆಯೇ? ಇಲ್ಲ, ಅವರೇ ಬಿಜೆಪಿಯಲ್ಲಿ ಹಿಂದುತ್ವವಾದಿ ನಾಯಕರಾದ ಬಸನಗೌಡ ಪಾಟೀಲ್ ಯತ್ನಾಳ್, ಸಿಟಿ ರವಿ, ಅನಂತ್‌ಕುಮಾರ್ ಹೆಗಡೆ, ಈಶ್ವರಪ್ಪ ಅವರಿಗೆ ಅನ್ಯಾಯವಾಗುತ್ತಿದೆ ಎಂದು ಹೇಳುತ್ತಿದ್ದಾರೆ ಎಂದರು.