ಬೆಂಗಳೂರು: ಬಿಜೆಪಿ ನಾಯಕರು 100 ಅಲ್ಲ 1,000 ಸಾವಿರ ಕೋಟಿ ಬಗ್ಗೆ ಮಾತನಾಡಲಿ ನನಗೆ ಏನು ಸಮಸ್ಯೆ ಇಲ್ಲ. ಆದರೆ ಈ ಬಗ್ಗೆ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರನ್ನು ಕೇಳಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಟಾಂಗ್ ನೀಡಿದ್ದಾರೆ.
ನಗರದಲ್ಲಿ ಇಂದು(ನ.18) ಕಾಂಗ್ರೆಸ್ ಶಾಸಕರಿಗೆ 100 ಕೋಟಿ ಆಫರ್ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ನಾಯಕರು 100 ಕೋಟಿಯಲ್ಲ 1,000 ಕೋಟಿಯ ಬಗ್ಗೆ ಮಾತನಾಡಲಿ. ಮೊದಲು ಈ ವಿಚಾರದ ಬಗ್ಗೆ ಬಸವನಗೌಡ ಪಾಟೀಲ್ ಯತ್ನಾಳ್‌ರವರನ್ನು ಪ್ರಶ್ನಿಸಬೇಕು ಎಂದರು.
ನೀವೂ ಯಾಕೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಪ್ರಶ್ನೆಗಳನ್ನು ಕೇಳಲ್ಲ. ಆದರೆ ನಮ್ಮನ್ನು ಮಾತ್ರ ಪ್ರಶ್ನಿಸುತ್ತಿರಾ? ನಮ್ಮನ್ನು ಪ್ರಶ್ನೆ ಕೇಳಿದರೆ ನಾವೇನು ಏನು ಹೇಳೋಕೆ ಸಾಧ್ಯ. ಮೊದಲು ಅವರು ಆಂತರಿಕ ತನಿಖೆ ಮಾಡಲಿ, ನಮ್ಮ ಸರ್ಕಾರವೂ ಸಹ ಈ ಬಗ್ಗೆ ತನಿಖೆ ನಡೆಸುತ್ತದೆ ಎಂದು ಹೇಳಿದ್ದಾರೆ.