ತುಮಕೂರು: ಕಾಂಗ್ರೆಸ್‌ನ ಕೆಲ ಅಯೋಗ್ಯರು ದೇಶ ವಿರೋಧಿ ಹೇಳಿಕೆ ನೀಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದ್ದಾರೆ.
ಈ ಬಗ್ಗೆ ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಹಲ್ಗಾಮ್‌ನಲ್ಲಿ ಉಗ್ರರ ಅಟ್ಟಹಾಸಕ್ಕೆ 26 ಜನರು ಬಲಿಯಾಗಿದ್ದಾರೆ. ಇದರಿಂದಾಗಿ ಉಗ್ರ ಸಂಘಟನೆ, ಪಾಕಿಸ್ತಾನದ ವಿರುದ್ಧ ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿತ್ತು. ಆಪರೇಷನ್ ಸಿಂಧೂರ್ ಮೂಲಕ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲಾಗಿದೆ ಎಂದರು.
ಭಾರತೀಯ ಸೇನೆಯು ಕ್ಷಿಪಣಿ ದಾಳಿ ನಡೆಸುವ ಮೂಲಕ ಉಗ್ರರನ್ನು ಹತ್ಯೆ ಮಾಡಲಾಗಿದೆ. ಭಾರತ, ಅಮೇರಿಕಾ ಹಿಟ್ ಲಿಸ್ಟ್‌ನಲ್ಲಿದ್ದ ಉಗ್ರರನ್ನು ನಮ್ಮ ಸೈನಿಕರು ಹತ್ಯೆ ಮಾಡಿದ್ದಾರೆ. ಆದರೆ ಕಾಂಗ್ರೆಸ್‌ನ ಕೆಲವರು ಆಪರೇಷನ್ ಸಿಂಧೂರ್ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಇದು ಸರಿಯಲ್ಲ. ಈ ಹೇಳಿಕೆಗಳಿಂದ ಯೋಧರಿಗೆ ಅಪಮಾನವಾಗಿದೆ ಎಂದು ಕಿಡಿಕಾರಿದರು.





