Mysore
15
scattered clouds

Social Media

ಶನಿವಾರ, 20 ಡಿಸೆಂಬರ್ 2025
Light
Dark

ಬಸ್‌ ಟಿಕೆಟ್‌ ದರ ಏರಿಕೆ ಖಂಡಿಸಿ ಪ್ರತಿಭಟನೆ ಮಾಡುತ್ತಿರುವ ಬಿಜೆಪಿಗೆ ಟಾಂಗ್‌ ಕೊಟ್ಟ ರಾಮಲಿಂಗಾರೆಡ್ಡಿ

ಬೆಂಗಳೂರು: ಬಸ್‌ ಪ್ರಯಾಣ ದರ ಏರಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ ನಡೆಸುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿ ಸರ್ಕಾರವಿದ್ದಾಗ ಕೂಡ ಬಸ್‌ ಟಿಕೆಟ್‌ ದರ ಏರಿಕೆ ಆಗಿದೆ ಎಂದು ಟಾಂಗ್‌ ನೀಡಿದ್ದಾರೆ.

ಜನವರಿ.5ರಿಂದ ರಾಜ್ಯದಲ್ಲಿ ಬಸ್‌ ಟಿಕೆಟ್‌ ದರ ಏರಿಕೆಯಾಗಲಿರುವ ಬಗ್ಗೆ ಈಗಾಗಲೇ ಸರ್ಕಾರ ಮಾಹಿತಿ ನೀಡಿದೆ. ಈ ಹಿನ್ನೆಲೆಯಲ್ಲಿ ಟಿಕೆಟ್‌ ದರ ಏರಿಕೆ ಮಾಡಿರುವುದನ್ನು ಖಂಡಿಸಿ ರಾಜ್ಯ ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದು, ಟಿಕೆಟ್‌ ದರ ಏರಿಕೆ ಮಾಡುವುದು ಬೇಡ ಎಂದು ಆಗ್ರಹಿಸುತ್ತಿದ್ದಾರೆ.

ಈ ಬೆನ್ನಲ್ಲೇ ಬಿಜೆಪಿ ನಾಯಕರ ಪ್ರತಿಭಟನೆ ಬಗ್ಗೆ ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು, ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಬಂದಾಗಿನಿಂದಲೂ ರೂಪಾಯಿ ಮೌಲ್ಯ ಕಡಿಮೆಯಾಗಿದೆ. ಡಾಲರ್‌ ಬೆಲೆ ಕಡಿಮೆಯಾದರೂ ಕಳೆದ 9 ವರ್ಷಗಳಿಂದ ಪೆಟ್ರೋಲ್‌, ಡೀಸೆಲ್‌ ದರ ಇಳಿಸಿಲ್ಲ. 2020ರ ಬಿಜೆಪಿ ಆಡಳಿತದ ಅವಧಿಯಲ್ಲಿ ಬಸ್‌ ಪ್ರಯಾಣ ದರ ಏರಿಕೆ ಆಗಿತ್ತು. ಆಗ ಜನರ ತೊಂದರೆ ನಿಮಗೆ ತಿಳಿಯಲಿಲ್ಲವೇ ಎಂದು ಬಿಜೆಪಿ ನಾಯಕರ ವಿರುದ್ಧವೇ ಕಿಡಿಕಾರಿದರು.

ಇನ್ನು ಮುಂದುವರಿದು ಮಾತನಾಡಿದ ಅವರು, ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ನಮ್ಮ ರಾಜ್ಯದಲ್ಲೇ ಪ್ರಯಾಣ ದರ ಕಡಿಮೆ ಇದೆ. ಬಿಜೆಪಿ ನಾಯಕರು ರಾಜ್ಯದ ಜನತೆಯ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಈ ಕೆಲಸ ಮಾಡುವುದನ್ನು ಬಿಜೆಪಿಯವರು ಮೊದಲು ಬಿಡಬೇಕು ಎಂದು ವಾಗ್ದಾಳಿ ನಡೆಸಿದರು.

 

 

Tags:
error: Content is protected !!