ಬೆಂಗಳೂರು: ಕಾಂಗ್ರೆಸ್ಸಿಗರು ಇಂದಿನ ಸಮಾವೇಶಕ್ಕೆ ಬಳಸಿದ ಹಣ ಯಾವುದು? ಅದರ ಲೆಕ್ಕ ಕೊಡಬೇಕು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅದು ಕಾಂಗ್ರೆಸ್ಸಿನ ಖಾತೆಯಿಂದ ಖರ್ಚಾದ ಹಣವೇ? ಅಥವಾ ನೀವು ಸರ್ಕಾರದ ಬೊಕ್ಕಸದಿಂದ ಖರ್ಚು ಮಾಡಿದ್ದೀರಾ ಎಂಬುದನ್ನು ಜನರಿಗೆ ತಿಳಿಸಬೇಕು ಎಂದು ಒತ್ತಾಯಿಸಿದರು.
ಇನ್ನು ಸುವರ್ಣಸೌಧದ ಮುಂದೆ ಗಾಂಧಿ ಪ್ರತಿಮೆಯನ್ನು ಇವತ್ತು ಪ್ರತಿಷ್ಠಾಪನೆ ಮಾಡಿದ್ದಾರೆ. ಸರ್ಕಾರಿ ಬೊಕ್ಕಸದಿಂದ ಗಾಂಧಿ ಪ್ರತಿಮೆ ಪ್ರತಿಷ್ಠಾಪನೆಗೆ ನಮ್ಮ ವಿರೋಧವಿಲ್ಲ ಎಂದು ತಿಳಿಸಿದರು.
ಇದು ಮಹಾತ್ಮ ಗಾಂಧಿಯವರು ಕಾಲದ ಕಾಂಗ್ರೆಸ್ ಪಕ್ಷ ಅಲ್ಲ. ಮಹಾತ್ಮ ಗಾಂಧಿ ಸಿದ್ಧಾಂತಕ್ಕೂ ಇವತ್ತಿನ ಗಾಂಧಿಗಳ ಸಿದ್ಧಾಂತಕ್ಕೂ ಅಜಗಜಾಂತರವಿದೆ. ಅವತ್ತಿನ ಗಾಂಧಿ ಕಾಂಗ್ರೆಸ್ ಪಕ್ಷಕ್ಕೆ ಯಾರು ಮದ್ಯಪಾನ ಮಾಡುತ್ತಿದ್ದರೋ ಅವರು ಸದಸ್ಯರಾಗುವ ಹಾಗಿರಲಿಲ್ಲ. ಇವತ್ತಿನ ಕಾಂಗ್ರೆಸ್ಸಿನವರು ರಾತ್ರಿಯಿಡೀ ಕುಡಿದು ಮಲಗಿದ್ದು, ಬೆಳಿಗ್ಗೆ ಸಮಾವೇಶ ಮಾಡುತ್ತಾರೆ ಎಂದು ಟೀಕೆ ಮಾಡಿದರು.