ಬೆಂಗಳೂರು: ಬಿಜೆಪಿ ಶಾಸಕ ಮುನಿರತ್ನ ಬಂಧನವಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಡಿ.ಕೆ.ಸುರೇಶ್ ಪ್ರತಿಕ್ರಿಯೆ ನೀಡಿದ್ದು, ತಪ್ಪು ಮಾಡಿರೋದು ಒಬ್ಬ ಸಾಮಾನ್ಯ ವ್ಯಕ್ತಿಯಲ್ಲ. ಅವರು ಮಾಜಿ ಮಂತ್ರಿ ಎಂದು ಕಿಡಿಕಾರಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮುನಿರತ್ನ ಬಂಧನ ವಿಚಾರವಾಗಿ ರಾಜಕೀಯ ಮಾಡೋದು ಬೇಡ. ತಪ್ಪು ಮಾಡಿರುವುದಕ್ಕೆ ಮುನಿರತ್ನ ಬಂಧನವಾಗಿದೆ ಅಷ್ಟೆ ಎಂದರು.
ಮುನಿರತ್ನರನ್ನು ತನಿಖೆ ಮಾಡಲು ಪೊಲೀಸರು ಬಂಧಿಸಿದ್ದಾರೆ. ಯಾರೇ ತಪ್ಪು ಮಾಡಿದ್ದರೂ ಅದು ತಪ್ಪೇ. ಕಾನೂನಿನ ಮುಂದೆ ಎಲ್ಲರೂ ಒಂದೇ ಎಂದರು.
ಜಾತಿ ಧರ್ಮವನ್ನು ಕೀಳಾಗಿ ನೋಡುವುದು. ಮಹಿಳೆಯರಿಗೆ ಅಗೌರವ ಕೊಡುವುದನ್ನು ಯಾರೂ ಕೂಡ ಸಹಿಸಲ್ಲ. ಕೆಲವರು ಇದಕ್ಕೆ ರಾಜಕೀಯ ಬಣ್ಣ ಬಳಿಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ದ್ವೇಷಕ್ಕೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಪೊಲೀಸರ ತನಿಖೆಯಿಂದ ಎಲ್ಲಾ ವಿಚಾರಗಳು ಸಾರ್ವಜನಿಕವಾಗಿ ಚರ್ಚೆಯಾಗುತ್ತವೆ. ಅಲ್ಲಿಯ ತನಕ ಬಿಜೆಪಿ ನಾಯಕರು ಸುಮ್ಮನಿದ್ದರೆ ಒಳ್ಳೆಯದು ಎಂದರು.