ಬೆಂಗಳೂರು: ರಾಜ್ಯಾದ್ಯಂತ ಬಿಪಿಎಲ್ ಕಾರ್ಡ್ ವಿವಾದ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಈ ಮಧ್ಯೆ ಬಿಪಿಎಲ್ ಕಾರ್ಡ್ ರದ್ದಾದವರ ನಿವಾಸಕ್ಕೆ ಬಿಜೆಪಿ ನಾಯಕರು ಭೇಟಿ ನೀಡಿ ಅಹವಾಲು ಸ್ವೀಕರಿಸುತ್ತಿದ್ದಾರೆ.
ಬೆಂಗಳೂರು ನಗರದಲ್ಲಿಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ನೇತೃತ್ವದ ಬಿಜೆಪಿ ನಾಯಕರು ಮಹಾಲಕ್ಷ್ಮೀ ಲೇಔಟ್ ಹಾಗು ನಂದಿನಿ ಲೇಔಟ್‌ಗಳಲ್ಲಿರುವ ಬಿಪಿಎಲ್ ಕಾರ್ಡ್ ರದ್ದಾದವರ ನಿವಾಸಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ಅಲ್ಲದೇ ಈ ವೇಳೆ ಆರ್.ಅಶೋಕ್‌ರಿಗೆ ಶಾಸಕರಾದ ಅಶ್ವಥ್ ನಾರಾಯಣ ಹಾಗೂ ಗೋಪಾಲಯ್ಯ ಸಹ ಸಾಥ್ ನೀಡಿ ಕಾರ್ಡ್ ರದ್ದಿನಿಂದ ಆಗಿರುವ ಸಮಸ್ಯೆಗಳ ಬಗ್ಗೆ ಜನರ ಬಳಿ ಅಹವಾಲು ಸ್ವೀಕರಿಸಿದ್ದಾರೆ.
ಇದೇ ವೇಳೆ ಬಿಜೆಪಿ ನಾಯಕರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಲಂಚ ತೆಗೆದುಕೊಳ್ಳುವುದಕ್ಕೆ ಬಿಪಿಎಲ್ ಕಾರ್ಡ್ ರದ್ದು ಮಾಡಿದ್ದಾರೆ. ಲಂಚ ನೀಡಿ ಬಡವರಿಗೆ ಕಾರ್ಡ್‌ಗಳನ್ನು ಕೊಟ್ಟಿದ್ದೀರಾ. ಈಗ ಲಂಚ ಬರುತ್ತಿಲ್ಲವಾ? ಈ ಸರ್ಕಾರದಲ್ಲಿ ಬಡವರ ಬಿಪಿಎಲ್ ಕಾರ್ಡ್‌ಗಳೂ ಕೂಡ ರದ್ದಾಗುವುದು ಗ್ಯಾರಂಟಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.