ಬೆಂಗಳೂರು: ಒಳ ಮಿಸಲಾತಿಯ ವಿಚಾರವಾಗಿ ಬಿಜೆಪಿ ನಾಯಕರು ಜನರನ್ನು ದಾರಿ ತಪ್ಪಿಸುವ ಮಾತುಗಳನ್ನಾಡುತ್ತಿದ್ದಾರೆ. ನ್ಯಾ. ನಾಗಮೋಹನ್ ದಾಸ್ ಅವರ ಆಯೋಗದ ವರದಿ ಸಲ್ಲಿಕೆಯಾದ 20 ದಿನಗಳಲ್ಲೇ ರಾಜ್ಯಸರ್ಕಾರ ಒಳಮೀಸಲಾತಿ ಜಾರಿ ಮಾಡಲಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 1992ರಲ್ಲಿ ಕಾಂಗ್ರೆಸ್ ಸರ್ಕಾರ ಒಳಮೀಸಲಾತಿಗಾಗಿ ನಾಯಮೂರ್ತಿ ಸದಾಶಿವ ಆಯೋಗವನ್ನು ರಚನೆ ಮಾಡಿತ್ತು. ಅದರ ವರದಿ ಕೂಡ ಸಲ್ಲಿಕೆಯಾಗಿತ್ತು. ಆದರೆ ಬಿಜೆಪಿ ಸರ್ಕಾರ ಸದಾಶಿವ ಆಯೋಗದ ವರದಿಯನ್ನು ತಿರಸ್ಕರಿಸಿ ಮುಗಿದ ಅಧ್ಯಾಯ ಎಂದು ಹೇಳಿತ್ತು.
ಈಗ ಹೋರಾಟ ಮಾಡುವುದಾಗಿ ಹೇಳುತ್ತಿರುವ ಗೋವಿಂದ ಕಾರಜೋಳ ರಾಜ್ಯದ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದರು. ಎ. ನಾರಾಯಣ ಸ್ವಾಮಿ ಕೇಂದ್ರದಲ್ಲಿ ಸಮಾಜ ಕಲ್ಯಾಣ ಸಚಿವರಾಗಿದ್ದರು. ಈ ಇಬ್ಬರ ಅಧಿಕಾರಾವಧಿಯಲ್ಲೇ ಒಳಮೀಸಲಾತಿ ಜಾರಿಯಾಗದೆ ಸದಾಶಿವ ಅಯೋಗ ವರದಿ ತಿರಸ್ಕಾರವಾಗಿತ್ತು ಎಂದರು.





