Mysore
20
overcast clouds
Light
Dark

ನಿಮ್ಮ ಗೊಡ್ಡು ಬೆದರಿಕೆಗಳಿಗೆ ನಾವು ಹೆದರಲ್ಲ ಎಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ

ಬೆಂಗಳೂರು: ಮೈಸೂರು ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಿಂದ ಮೈಸೂರಿಗೆ ಬಿಜೆಪಿ-ಜೆಡಿಎಸ್‌ ಮೊದಲ ದಿನದ ಪಾದಯಾತ್ರೆ ಮುಕ್ತಾಯಗೊಂಡಿದೆ.

ಪಾದಯಾತ್ರೆಯ ಮೊದಲ ದಿನದ ಅಂತ್ಯದ ವೇಳೆ ಸಭೆ ನಡೆಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು, ನಾವು ಪಾದಯಾತ್ರೆ ಮಾಡಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಧಮ್ಕಿ ಹಾಕುತ್ತಿದ್ದಾರೆ. ನಿಮ್ಮ ಗೊಡ್ಡು ಬೆದರಿಕೆಗೆ ನಾವು ಹೆದರಲ್ಲ ಎಂದು ಕಿಡಿಕಾರಿದ್ದಾರೆ.

ಮೈಸೂರು ಮುಡಾ ಹಗರಣವನ್ನು ಸಿಬಿಐಗೆ ನೀಡಬೇಕೆಂಬುದೇ ನಮ್ಮ ಆಗ್ರಹ. ಅಷ್ಟನ್ನು ಬಿಟ್ಟು ನಮಗೆ ಏನೂ ಬೇಕಾಗಿಲ್ಲ. ನಮ್ಮ ಪಾದಯಾತ್ರೆಯಿಂದ ಕಾಂಗ್ರೆಸ್‌ನವರಿಗೆ ತಡೆಯಲು ಆಗುತ್ತಿಲ್ಲ. ಅದಕ್ಕೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಕಾಂಗ್ರೆಸ್‌ ಹೈಕಮಾಂಡ್‌ಗೆ ರಾಜ್ಯ ಸರ್ಕಾರ ಕಪ್ಪ ಕಾಣಿಕೆ ಕೊಟ್ಟಿದೆ ಎಂದು ಕಿಡಿಕಾರಿದರು.

ಇನ್ನು ಮುಂದುವರಿದು ಮಾತನಾಡಿದ ಅವರು, ನಾಳೆಯೂ ಕೇಂದ್ರ ಸಚಿವ ಕುಮಾರಸ್ವಾಮಿ ಹಾಗೂ ಬಿಜೆಪಿ-ಜೆಡಿಎಸ್‌ ಶಾಸಕರು ಕೂಡ ಪಾದಯಾತ್ರೆಯಲ್ಲಿ ಇರಲಿದ್ದಾರೆ ಎಂದು ನಾಳಿನ ಪಾದಯಾತ್ರೆ ಬಗ್ಗೆ ವಿವರ ನೀಡಿದರು.

ಇನ್ನು ಯಾದಗಿರಿ ಪಿಎಸ್‌ಐ ಪರಶುರಾಮ್‌ ಸಾವಿನ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಪರಶುರಾಮ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ವರ್ಗಾವಣೆಗೆ 30 ಲಕ್ಷ ರೂ ಕೇಳಿದ್ದಾರೆ. ಈ ಬಗ್ಗೆ ಪರಶುರಾಮ್‌ ಅವರ ಪತ್ನಿಯೇ ಹೇಳಿದ್ದಾರೆ. ಯಾದಗಿರಿ ಕಾಂಗ್ರೆಸ್‌ ಶಾಸಕ ಹಣ ಕೇಳಿರುವುದು ಬಯಲಿಗೆ ಬಂದಿದೆ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ್‌ ತುನ್ನೂರು ಹಾಗೂ ಅವರ ಪುತ್ರ ಪಂಪನಗೌಡ ವಿರುದ್ಧ ಕಿಡಿಕಾರಿದರು.