Mysore
15
scattered clouds

Social Media

ಶನಿವಾರ, 20 ಡಿಸೆಂಬರ್ 2025
Light
Dark

ಬಿಜೆಪಿ ಸುಳ್ಳಿನ ಕಾರ್ಖಾನೆ: ಸಿಎಂ ಸಿದ್ದರಾಮಯ್ಯ

ಕೋಲಾರ: ಈ ಬಾರಿ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೌತಮ್ ಗೆಲುವು ಖಚಿತ ಎಂದು ಸಿ‌ಎಂ ಸಿದ್ದರಾಮಯ್ಯ ಭರವಸೆ ವ್ಯಕ್ತಪಡಿಸಿದರು.

ಕೋಲಾರದಲ್ಲಿ ಕುರುಡುಮಲೆ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಬಳಿಕ ನಡೆಸಿದ ರೋಡ್ ಶೋ ನಲ್ಲಿ ಮಾತನಾಡಿದರು.

ನಮ್ಮ ಅಭ್ಯರ್ಥಿ ಗೌತಮ್ ಸಜ್ಜನರು. ಸಾಮಾನ್ಯ ಕಾರ್ಯಕರ್ತರಾಗಿ ಬುಡಮಟ್ಟದಿಂದ ಬೆಳೆದು ಈಗ ಅಭ್ಯರ್ಥಿ ಆಗಿದ್ದಾರೆ. ಇವರು ಅತ್ಯಂತ ಬಹುಮತದಿಂದ ಗೆಲ್ಲುತ್ತಾರೆ. ನಿಮ್ಮೆಲ್ಲರ ಸಹಕಾರ, ಆಶೀರ್ವಾದ ಗೌತಮ್ ಗೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಇರಲಿ ಎಂದರು.

ಮೋದಿ ಸರ್ಕಾರ ಪೆಟ್ರೋಲ್, ಡೀಸೆಲ್, ಸಿಲಿಂಡರ್, ರಸಗೊಬ್ಬರ, ಅಡುಗೆ ಎಣ್ಣೆ, ಬೇಳೆ-ಕಾಳು, ತರಕಾರಿ ಸೇರಿ ಪ್ರತಿಯೊಂದರ ಬೆಲೆಯನ್ನು ವಿಪರೀತ ಏರಿಸಿತ್ತು. ಇದರಿಂದ ನಾಡಿನ ಪ್ರತೀ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದವು. ಈ ಸಂಕಷ್ಟಕ್ಕೆ ಸ್ಪಂದಿಸಿ ಕಷ್ಟ ಕಡಿಮೆ ಮಾಡುವ ಉದ್ದೇಶದಿಂದ ಐದು ಗ್ಯಾರಂಟಿ ಭರವಸೆಗಳನ್ನು ಘೋಷಿಸಿದೆವು. ಅಧಿಕಾರಕ್ಕೆ ಬಂದು ಐದಕ್ಕೆ ಐದನ್ನೂ ಜಾರಿ ಮಾಡಿದೆವು.

ಮೊದಲಿಗೆ ಗ್ಯಾರಂಟಿಗಳ ಜಾರಿ ಸಾಧ್ಯವೇ ಇಲ್ಲ ಎನ್ನುವ ಸುಳ್ಳನ್ನು ಬಿಜೆಪಿ ಹುಟ್ಟಿಸಿತು. ಗ್ಯಾರಂಟಿಗಳು ಜಾರಿಯಾದ ಬಳಿಕ ಹೊಸ ಸುಳ್ಳು ಸೃಷ್ಟಿಸಿದ್ದಾರೆ. ಗ್ಯಾರಂಟಿಗಳು ನಿಂತು ಹೋಗುತ್ತವೆ ಎನ್ನುತ್ತಿದ್ದಾರೆ. ಯಾವುದೇ ಕಾರಣಕ್ಕೂ ನಮ್ಮ ಗ್ಯಾರಂಟಿಗಳು ನಿಲ್ಲುವುದಿಲ್ಲ. ಕಾಂಗ್ರೆಸ್ ಗ್ಯಾರಂಟಿಗಳಿಗೆ ಐದು ವರ್ಷ ವಾರಂಟಿ ಇದೆ ಎಂದರು‌.

ಸೋಲುವ ಭೀತಿಯಿಂದ ಬಿಜೆಪಿ ಸೃಷ್ಟಿಸುವ ಸುಳ್ಳುಗಳಿಗೆ ಸೊಪ್ಪಾಕಬೇಡಿ. ಬಿಜೆಪಿ ಸುಳ್ಳಿನ ಕಾರ್ಖಾನೆ. ನಾವು ಕೊಟ್ಟ ಮಾತಿನಂತೆ ನಡೆದುಕೊಂಡು ನಿಮ್ಮ ಮತಕ್ಕೆ ಘನತೆ ತಂದಿದ್ದೇವೆ. ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಗೆಲ್ಲಿಸಿ ನಿಮ್ಮ ಮತಕ್ಕೆ ಮೌಲ್ಯ ತಂದು ಕೊಡುವ ರೀತಿಯಲ್ಲಿ ಸರ್ಕಾರ ಕೆಲಸ ಮಾಡುತ್ತದೆ ಎಂದರು.

ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಎಂ.ಸಿ.ಸುಧಾಕರ್, ಬೈರತಿ ಸುರೇಶ್, ಮಾಜಿ ಸಚಿವ ರಮೇಶ್ ಕುಮಾರ್, ಮಾಜಿ ಮುಖ್ಯ ಸಚೇತಕ ಪ್ರಕಾಶ್ ರಾಥೋಡ್ ಸೇರಿ ಕೋಲಾರ ಜಿಲ್ಲೆಯ ಎಲ್ಲಾ ಶಾಸಕರುಗಳು ಹಾಜರಿದ್ದರು.

Tags:
error: Content is protected !!