Mysore
20
overcast clouds
Light
Dark

ವಿಧಾನಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ಗೆ ಹೈಕಮಾಂಡ್‌ ಬುಲಾವ್‌

ರಾಮನಗರ: ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಲು ತಯಾರಿ ನಡೆಸಿದ್ದ ವಿಧಾನಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ಗೆ ಬಿಜೆಪಿ ಹೈಕಮಾಂಡ್‌ ಬುಲಾವ್‌ ನೀಡಿದೆ.

ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ ಅಭಿಮಾನಿ ಬಳಗ ಹಾಗೂ ಸಮಾನ ಮನಸ್ಕರ ವೇದಿಕೆ ವತಿಯಿಂದ ಇಂದು ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಆದರೆ ಸಿಪಿವೈಗೆ ಬಿಜೆಪಿ ಹೈಕಮಾಂಡ್‌ ಬುಲಾವ್‌ ನೀಡಿದ ಹಿನ್ನೆಲೆಯಲ್ಲಿ ಈ ಸಮಾವೇಶವನ್ನು ರದ್ದು ಮಾಡಲಾಗಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ನೇತೃತ್ವದಲ್ಲಿ ನಾಳೆ ದೆಹಲಿಯಲ್ಲಿ ಸಭೆ ನಡೆಯಲಿದೆ. ಸಭೆಯಲ್ಲಿ ಚನ್ನಪಟ್ಟಣ ಅಭ್ಯರ್ಥಿ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂಬ ಮಾತುಗಳು ಹೇಳಿ ಬರುತ್ತಿವೆ. ಹಾಗಾಗಿ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ ಅವರನ್ನು ದೆಹಲಿಗೆ ಕರೆಸಿರುವ ಬಿಜೆಪಿ ನಾಯಕರು ಟಿಕೆಟ್‌ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಕೇಂದ್ರ ಸಚಿವ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ರಾಜೀನಾಮೆಯಿಂದ ತೆರವಾಗಿರುವ ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆಗೆ ನಾಳೆ ಅಭ್ಯರ್ಥಿ ಯಾರೆಂದು ತಿಳಿಯಲಿದ್ದು, ಬಿಜೆಪಿ-ಜೆಡಿಎಸ್‌ ಕಾರ್ಯಕರ್ತರ ಚಿತ್ತ ದೆಹಲಿಯ ಸಭೆಯತ್ತ ನೆಟ್ಟಿದೆ.

ಇಂದು ದೆಹಲಿಗೆ ತೆರಳಿರುವ ಸಿ.ಪಿ.ಯೋಗೇಶ್ವರ್‌ಗೆ ಹೈಕಮಾಂಡ್‌ ಸಿಹಿ ಸುದ್ದಿ ನೀಡಲಿದೆ ಎನ್ನಲಾಗಿದ್ದು, ಯೋಗೇಶ್ವರ್‌ ಅಭಿಮಾನಿಗಳ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ.