ಕಲಬುರಗಿ: ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಹರಗಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರು ರಾಜ್ಯಪಾಲರ ಕಚೇರಿಯನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಆರೋಪ ಮಾಡಿದ್ದಾರೆ.
ಈ ಬಗ್ಗೆ ಮಾಧ್ಯಗಳ ಜೊತೆ ಮಾತನಾಡಿರುವ ಅವರು, ಮುಡಾ ಪ್ರಕರಣದಲ್ಲಿ ರಾಜಕೀಯ ದುರುದ್ದೇಶ ಇರುವುದು ಕಾಣುತ್ತಿದೆ. ಕೇವಲ 24 ಗಂಟೆಗಳಲ್ಲಿ ಸಿದ್ದರಾಮಯ್ಯ ಅವರಿಗೆ ನೋಟಿಸ್ ನೀಡಿರುವುದನ್ನು ನೋಡಿದರೇ ಅದರ ಒಳಮರ್ಮ ಅರ್ಥವಾಗುತ್ತದೆ. ಇದರಿಂದ ಕೇಂದ್ರ ಸರ್ಕಾರಕ್ಕೆ ರಾಜ್ಯಪಾಲರು ಕೈಗೊಂಬೆ ಆಗಿರುವುದು ಕಾಣುತ್ತದೆ ಎಂದು ದೂರಿದರು.
ರಾಜ್ಯದಲ್ಲಿ ಬಿಜೆಪಿ ವಿರುದ್ಧ ಬಿಜೆಪಿಯೇ ಹೋರಾಟ ಮಾಡುತ್ತಿದೆ. ಇಲ್ಲಿ ಅಶೋಕ್ ಹಾಗೂ ವಿಜಯೇಂದ್ರ ಅವರ ನಾಯಕತ್ವವನ್ನು ಯಾರು ಒಪ್ಪುತ್ತಿಲ್ಲ. ಬಿಜೆಪಿ ಅವರು ಬೇರೆ ಬೇರೆ ಪಾದಯಾತ್ರೆ ಮಾಡುವ ಬದಲು ಹೆಹಲಿ ಚಲೋ ಮಾಡಿದರೆ ಒಳಿತಾಗುತ್ತದೆ ಎಂದು ವ್ಯಂಗ್ಯವಾಡಿದರು.
ಮೈಸೂರು ಚಲೋ ಯಾತ್ರೆಗೆ ಬಿಜೆಪಿಯ ಹಿರಿಯ ನಾಯಕರು ಯಾರೂ ಸಹಾ ಭಾಗವಹಿಸಿಲ್ಲ. ಇದರಿಂದಲೇ ನಮಗೆ ಬಿಜೆಪಿಯಲ್ಲಿ ಒಗ್ಗಟ್ಟಿಲ್ಲ ಎಂಬುದನ್ನು ಸಾಭೀತುಪಡಿಸುತ್ತದೆ. ಮೈಸೂರು ಚಲೋ ಎಂಬುದು ಕೇವಲ ಬಿವೈ ವಿಜಯೇಂದ್ರ ಹಾಗೂ ನಿಖಿಲ್ ಕುಮಾರಸ್ವಾಮಿ ಅವರನ್ನು ಲಾಂಚ್ ಮಾಡುವುದಷ್ಟೆ ಇದರ ಉದ್ದೇವಾಗಿತ್ತು ಎಂದು ಲೇವಡಿ ಮಾಡಿದರು.





