ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಸೌಜನ್ಯ ಅವರ ಮನೆಗೆ ಭೇಟಿ ನೀಡುವ ಮೂಲಕ ವಿವಾದವನ್ನು ಅನಗತ್ಯವಾಗಿ ಕೆಣಕುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪಮೊಯ್ಲಿ ಆಕ್ಷೇಪಿಸಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರಿಗೆ ಧರ್ಮಸ್ಥಳದ ವಿವಾದ ಕೊನೆಗೊಳ್ಳುವುದು ಬೇಕಿಲ್ಲ. ಅದಕ್ಕಾಗಿ ಪದೇಪದೇ ಕೆಲ ವಿಚಾರಗಳನ್ನು ಕೆಣಕುತ್ತಿದ್ದಾರೆ ಎಂದು ಟೀಕಿಸಿದರು.
ನೀರಿನಲ್ಲಿ ಮುಳುಗುವ ಮನುಷ್ಯನಿಗೆ ಒಂದು ಹುಲ್ಲು ಕಡ್ಡಿಯೂ ಆಶ್ರಯವಾಗುತ್ತದೆ. ಅದೇ ರೀತಿ ಬಿಜೆಪಿಯವರಿಗೆ ಈಗ ಧರ್ಮಸ್ಥಳದ ವಿವಾದ ಬೇಕಾಗಿದೆ. ಅದು ಪೂರ್ಣ ಇತ್ಯರ್ಥಗೊಳ್ಳುವುದು ಬಿಜೆಪಿಗೆ ಬೇಕಿಲ್ಲ ಎಂದರು.
ಸೌಜನ್ಯ ಪ್ರಕರಣದಲ್ಲಿ ಈಗಾಗಲೇ ಸಿಬಿಐ ತನಿಖೆಯಾಗಿ ದೋಷಾರೋಪಣಾ ವರದಿ ಸಲ್ಲಿಕೆಯಾಗಿ, ನ್ಯಾಯಾಲಯವು ತೀರ್ಪು ನೀಡಿದೆ. ಅದು ಮುಗಿದಿದೆ. ಆದರೂ ಬಿಜೆಪಿಯವರು ಸೌಜನ್ಯ ಮನೆಗೆ ಭೇಟಿ ನೀಡಿ ಅನುಕಂಪ ವ್ಯಕ್ತ ಪಡಿಸುವ ಮೂಲಕ ವಿವಾದವನ್ನು ಕೆಣಕುತ್ತಿದ್ದಾರೆ. ಸೌಜನ್ಯ ಪ್ರಕರಣ ಸಂಸ್ಥೆಯ ವಿರುದ್ಧವಿದೆ ಎಂದು ಹೇಳಿದರು.
ಎಸ್‍ಐಟಿ ತನಿಖೆ ಮುಕ್ತಾಯದ ಹಂತದಲ್ಲಿದೆ. ಈಗ ಎನ್‍ಐಎ, ಸಿಬಿಐ ತನಿಖೆಗಳಾಗಬೇಕು ಎಂದು ಹೇಳುವ ಮೂಲಕ ಬಿಜೆಪಿ ಮತ್ತಷ್ಟು ಗೊಂದಲ ಮೂಡಿಸುತ್ತದೆ. ಎಸ್‍ಐಟಿ ತನಿಖೆಯನ್ನು ಧರ್ಮಸ್ಥಳದ ಖಾವಂದರಾದ ವೀರೇಂದ್ರ ಹೆಗ್ಗಡೆಯವರೇ ಸ್ವಾಗತಿಸಿದ್ದಾರೆ. ಅವರು ತುಂಬಾ ಒಳ್ಳೆಯವರು, ತಿಳುವಳಿಕೆ ಹೊಂದಿರುವವರು. ಬಿಜೆಪಿಯವರಿಗೆ ತಿಳುವಳಿಕೆ ಇಲ್ಲ ಎಂದು ಮೊಯ್ಲಿ ಕಿಡಿಕಾರಿದರು.





