ಹುಬ್ಬಳ್ಳಿ: 500 ರೂ ಮುಖಬೆಲೆಯ ನೋಟುಗಳ ಮೇಲೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಚಿತ್ರ ಮುದ್ರಿಸುವಂತೆ ಕೇಂದ್ರ ಸರ್ಕಾರಕ್ಕೆ ಬಿಜೆಪಿ ಒತ್ತಾಯ ಮಾಡಿದೆ.
ಈ ಬಗ್ಗೆ ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು, 500 ರೂ ಮುಖಬೆಲೆಯ ನೋಟಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರ ಹಾಕಬೇಕು ಎನ್ನುವ ಆಗ್ರಹ ಮೊದಲಿನಿಂದಲೂ ಇದೆ. ಇದೇ ಏಪ್ರಿಲ್.14ರ ಅಂಬೇಡ್ಕರ್ ಅವರ ಜನ್ಮದಿನದ ಒಳಗೆ ಈ ಕಾರ್ಯವನ್ನು ಕೇಂದ್ರ ಸರ್ಕಾರ ಮಾಡಬೇಕು ಎಂದು ಮನವಿ ಮಾಡಿದರು.
ಏಪ್ರಿಲ್.14ರಂದು ಅಂಬೇಡ್ಕರ್ ಅವರ ಜನ್ಮದಿನಾಚರಣೆಯ ಮೊದಲು ಈ ನಿರ್ಧಾರ ಕೈಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಗಮನಕ್ಕೆ ತರುವಂತೆ ಮನವಿ ಮಾಡಿದರು.
ನೋಟುಗಳ ಮೇಲೆ ಅಂಬೇಡ್ಕರ್ ಅವರ ಚಿತ್ರವನ್ನು ನೋಡುವುದು ದಲಿತ ಸಮುದಾಯಗಳಿಗಷ್ಟೇ ಅಲ್ಲ. ಇಡೀ ದೇಶಕ್ಕೆ ಅಂಬೇಡ್ಕರ್ ನೀಡಿದ ಕೊಡುಗೆಗಳನ್ನು ಸ್ಮರಿಸುವ ಇತರರ ಬಹುದಿನಗಳ ಕನಸಾಗಿದೆ. ಇದಲ್ಲದೇ ಅಂಬೇಡ್ಕರ್ ಅವರನ್ನು ಭಾರತದಲ್ಲಿ ಮಾತ್ರವಲ್ಲದೇ 150 ದೇಶಗಳ ಜನರೂ ಕೂಡ ಗೌರವಿಸುತ್ತಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಇನ್ನು ಸಂಸತ್‌ನಲ್ಲಿ ಕೇಂದ್ರ ಸಚಿವ ಅಮಿತ್ ಶಾ ಮಾತನಾಡಿದ್ದು ಹಿಂದಿಯಲ್ಲಿ. ಈ ಭಾಷೆ ಅರ್ಥವಾಗದವರು ಬೀದಿಗೆ ಇಳಿದಿದ್ದಾರೆ. ಮೊದನಿನಂತಹ ಸಂಘಟನೆಗಳು ಈಗ ಇಲ್ಲ. ಈಗಿರುವುದೆಲ್ಲಾ ಹೊಟ್ಟೆಪಾಡಿನ ಸಂಘಟನೆಗಳು. ಅವರೆಲ್ಲ ಅಂಬೇಡ್ಕರ್ ಅವರ ಗುರುತಿನ ಚೀಟಿಯಷ್ಟೇ ಆಗಿದ್ದಾರೆ ಎಂದು ವ್ಯಂಗ್ಯವಾಡಿದರು.