ಚಿಕ್ಕಮಗಳೂರು: ಬಿಜೆಪಿಯಿಂದ 50 ಅಲ್ಲ 100 ಕೋಟಿ ರೂಪಾಯಿಗಳಷ್ಟು ಆಫರ್ ಬಂದಿದೆ ಎಂಬುದರ ಬಗ್ಗೆ ನನಗೆ ಮಾಹಿತಿ ಇಲ್ಲ. ನನ್ನನ್ನು ಯಾರು ಸಂಪರ್ಕಿಸಿಲ್ಲ ಎಂದು ಕಾಂಗ್ರೆಸ್ ಶಾಸಕ ಎಚ್.ಡಿ.ತಮ್ಮಯ್ಯ ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ 100 ಕೋಟಿ ಆಫರ್ ಬಂದಿದೆ ಎಂಬುದು ಸುಳ್ಳು. ಈ ಬಗ್ಗೆ ನನ್ನನ್ನು ಯಾರೂ ಕೂಡ ಸಂಪರ್ಕ ಮಾಡಿಲ್ಲ, ಆಫರ್ ಬಂದಿದೆ ಎಂದು ಯಾರ್ ಹೇಳಿದ್ದಾರೆ ಅವರನ್ನೇ ನೀವು ಕೇಳಬೇಕು. ನನಗೆ ಅದರ ಬಗ್ಗೆ ಯಾವ ಮಾಹಿತಿಯೂ ಇಲ್ಲ. ನನ್ನನ್ನು ಈ ಭಾಗದ ಪ್ರಜೆಗಳು ಆಯ್ಕೆ ಮಾಡಿದ್ದಾರೆ. ಆ ಕಾರಣವಾಗಿ ನಾನು ಕಾಂಗ್ರೆಸ್ ನೇತೃತ್ವದಲ್ಲಿ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿಕೊಂಡು ಹೋಗುತ್ತೇನೆ ಎಂದರು.
ರಾಜ್ಯದ ಜನತೆ ಆದೇಶದ ಮೇರೆಗೆ ಕಾಂಗ್ರೆಸ್‌ನ 136 ಶಾಸಕರು ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಜನಾದೇಶದ ಮೂಲಕ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಆಡಳಿತ ನಡೆಸುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ಶಾಸಕರನ್ನು ಕೊಂಡುಕೊಳ್ಳುವ ಬಗ್ಗೆ ಯಾರು ಹೇಳಿದ್ದಾರೋ ಅವರನ್ನೇ ಕೇಳಬೇಕು. ಈ ವಿಚಾರವನ್ನು ಚರ್ಚಿಸುವಷ್ಟು ನಾನು ದೊಡ್ಡ ವ್ಯಕ್ತಿಯಲ್ಲ ಎಂದು ಹೇಳಿದರು.





