ಬೆಂಗಳೂರು: ಜಗತ್ಪ್ರಸಿದ್ದ ಮೈಸೂರು ಅರಮನೆಯ ಆವರಣದಲ್ಲಿರುವ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ದ್ವಾರದ ಮುಂಭಾಗ ಪಾರಿವಾಳಗಳಿಗೆ ನಿತ್ಯ ಧಾನ್ಯ ಚೆಲ್ಲುತ್ತಿರುವುದರಿಂದ ಅನಾನುಕೂಲವಾಗುತ್ತಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಧಾನ್ಯಗಳನ್ನು ಹಾಕಲು ನಿಗದಿತ ಪ್ರದೇಶ ಗುರುತಿಸುವಂತೆ ಕಾನೂನು ಮತ್ತು ಪ್ರವಾಸೋದ್ಯಮ ಇಲಾಖೆ ಸಚಿವ ಹೆಚ್.ಕೆ.ಪಾಟೀಲ್ ಸೂಚನೆ ನೀಡಿದ್ದಾರೆ.
ಈ ಕುರಿತು ಖಡಕ್ ಆದೇಶ ಹೊರಡಿಸಿರುವ ಸಚಿವ ಹೆಚ್.ಕೆ.ಪಾಟೀಲ್ ಅವರು, ವಿಶ್ವವಿಖ್ಯಾತ, ಸಾಂಸ್ಕೃತಿಕ, ಪಾರಂಪರಿಕ, ಐತಿಹಾಸಿಕವುಳ್ಳ ತಾಣವಾದ ಮೈಸೂರು ಅರಮನೆಯ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ದ್ವಾರದ ಮುಂದೆ ಪಾರಿವಾಳಗಳಿಗೆ ನಿತ್ಯ ಧಾನ್ಯಗಳನ್ನು ತಂದು ಚೆಲ್ಲುತ್ತಿದ್ದಾರೆ. ಇದರಿಂದ 10ನೇ ಚಾಮರಾಜೇಂದ್ರ ಒಡೆಯರ್ ಅವರ ಪ್ರತಿಮೆ ಮತ್ತು ಅರಮನೆಯ ಆವರಣದ ಸೌಂದರ್ಯ ಹಾಗೂ ಅದರ ಅಸ್ತಿತ್ವಕ್ಕೆ ಧಕ್ಕೆ ಬರುತ್ತಿದೆ. ಸಾರ್ವಜನಿಕ ಆರೋಗ್ಯ ಮತ್ತು ಪ್ರವಾಸಿಗರಿಗೆ ತೀವ್ರ ಅನಾನುಕೂಲವಾಗುತ್ತಿದೆ ಎಂದು ಹಲವಾರು ದೂರುಗಳು ಬಂದಿವೆ.
ಆದ್ದರಿಂದ ಅರಮನೆಯ ಆವರಣದ ಸ್ವಚ್ಛತೆ ಕಾಪಾಡುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿ. ಆದ್ದರಿಂದ ಪಕ್ಷಿಗಳಿಗೆ ಧಾನ್ಯ ನೀಡುವುದಕ್ಕೆ ನಿಗದಿತ ಪ್ರದೇಶ ಗುರುತಿಸಿ ಎಂದು ಜಿಲ್ಲಾಧಿಕಾರಿ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಅಧ್ಯಕ್ಷರಿಗೆ ಸಚಿವ ಹೆಚ್.ಕೆ.ಪಾಟೀಲ್ ಖಡಕ್ ಸೂಚನೆ ನೀಡಿದ್ದಾರೆ.




