ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪ್ರತಿ ಲೀಟರ್ ನೀರಿನ ದರವನ್ನು 1 ಪೈಸೆ ಏರಿಕೆ ಮಾಡಲು ನಿರ್ಧರಿಸಲಾಗಿದೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ವಿಧಾನ ಪರಿಷತ್‌ನಲ್ಲಿ ಇಂದು(ಮಾರ್ಚ್.14) ಈ ಕುರಿತು ಶೂನ್ಯವೇಳೆಯಲ್ಲಿ ಕಾಂಗ್ರೆಸ್ ಎಂಎಲ್‌ಸಿ
ರಾಮೋಜಿರಾವ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರತಿ ಲೀಟರ್ ನೀರಿನ ದರವನ್ನು 10 ಪೈಸೆಗೆ ಏರಿಕೆ ಮಾಡಬೇಕೆಂದು ಬೆಂಗಳೂರು ನೀರು ಸರಬರಾಜು ಮಂಡಳಿ ಪ್ರಸ್ತಾವನೆ ಸಲ್ಲಿಸಿದೆ. ಏಕಾಏಕಿ ಇಷ್ಟು ದೊಡ್ಡ ಮಟ್ಟದ ದರವನ್ನು ಪರಿಷ್ಕರಣೆ ಮಾಡಿದರೆ ಗ್ರಾಹಕರಿಗೆ ಹೊರೆಯಾಗುತ್ತದೆ ಎಂಬ ಕಾರಣಕ್ಕೆ 1 ಪೈಸೆಯನ್ನು ಏರಿಕೆ ಮಾಡಲು ನಿರ್ಧಾರಿಸಲಾಗಿದೆ ಎಂದರು.
ಬೆಂಗಳೂರಿನಲ್ಲಿ 2014 ರಿಂದ ನೀರಿನ ದರವನ್ನು ಪರಿಷ್ಕರಣೆ ಮಾಡಿಲ್ಲ. ಅದರ ಪರಿಣಾಮವಾಗಿ ಬಿಡಬ್ಲ್ಯುಎಸ್‍ಎಸ್‍ಬಿಗೆ ಪ್ರತಿ ವರ್ಷ ಕೋಟ್ಯಂತರ ರೂ. ನಷ್ಟವಾಗುತ್ತಿದೆ. ಅಲ್ಲಿನ ಸಿಬ್ಬಂದಿಗೂ ವೇತನ ನೀಡಲು ಕಷ್ಟವಾಗುತ್ತದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ಹೀಗಾಗಿ ಸಿಬ್ಬಂದಿಗಳ ವೇತನ, ವಿದ್ಯುತ್ ಬಿಲ್ ಮತ್ತು ನಿರ್ವಹಣೆ, ಪೈಪ್ ಅಳವಡಿಕೆ ಸೇರಿದಂತೆ ಇನ್ನಿತರ ಕೆಲಸ ಕಾರ್ಯಗಳಿಗೆ ಪ್ರತಿ ತಿಂಗಳು ಕೋಟ್ಯಂತರ ರೂ. ಹಣ ವ್ಯಯವಾಗುತ್ತದೆ. ನಾವು ನೀರಿನ ದರವನ್ನು ಪರಿಷ್ಕರಣೆ ಮಾಡದಿದ್ದರೆ ಇದನ್ನು ನಿರ್ವಹಿಸುವುದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಜಲಮಂಡಳಿಯವರು 2014 ರಿಂದ ನೀರಿನ ದರ ಪರಿಷ್ಕರಣೆ ಆಗದ ಹಿನ್ನಲೆಯಲ್ಲಿ ಅನೇಕ ಬಾರಿ ಪ್ರಸ್ತಾವನೆ ಸಲ್ಲಿಸಿದ್ದು, ಪ್ರತಿ ಲೀಟರ್‌ಗೆ 10 ಪೈಸೆಯಿಂದ 7 ಪೈಸೆವರೆಗೂ ಹೆಚ್ಚಳ ಮಾಡಬೇಕೆಂದು ಮನವಿ ಮಾಡಿದ್ದರು.
ನಾವು ಒಂದು ಕಡೆ ಜಲಮಂಡಳಿ ನಿರ್ವಹಣೆ ಮತ್ತೊಂದು ಕಡೆ ಸಾರ್ವಜನಿಕರ ಹಿತವನ್ನು ಕಾಪಾಡಬೇಕು. ಹೀಗಾಗಿ ಎಲ್ಲವನ್ನು ಸರಿದೂಗಿಸಲು ಪ್ರತಿ ಲೀಟರ್ 1 ಪೈಸೆ ಹೆಚ್ಚಳ ಮಾಡುತ್ತಿದ್ದೇವೆ. ಸಾರ್ವಜನಿಕರು ಸ್ವಲ್ಪ ಸಮಸ್ಯೆಯಾದರೂ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ರಾಮೋಜಿ ರಾವ್ ಪ್ರಶ್ನೆ ಏನಾಗಿತ್ತು?
ವಿಧಾನ ಪರಿಷತ್ ಸದಸ್ಯ ರಾಮೋಜಿ ರಾವ್ ಅವರು, ನೀರಿನ ಟ್ಯಾಂಕರ್‌ಗಳ ದರ ಹೆಚ್ಚಾಗುತ್ತಿದೆ. ಕೆಲವು ಬಡಾವಣೆಗಳಲ್ಲಿ ನೀರು ಸರಿಯಾಗಿಪೂರೈಕೆ ಆಗುತ್ತಿಲ್ಲ ಯಾಕೆ ಎಂದು ಪ್ರಶ್ನಿಸಿದರು.
ಖಾಸಗಿ ನೀರಿನ ಟ್ಯಾಂಕರ್‌ಗಳು ದುಪ್ಪಟ್ಟು ದರದ ಬೇಡಿಕೆ ಇಡುತ್ತಿವೆ. ಹೀಗಾಗಿ ಉಚಿತ ನೀರಿನ ಟ್ಯಾಂಕರ್‌ಗಳನ್ನು ತುರ್ತಾಗಿ ವ್ಯವಸ್ಥೆ ಮಾಡಿ ಎಂದು ಮನವಿ ಮಾಡಿದರು.





