ಬೆಂಗಳೂರು: ಕಳೆದ ಒಂದು ತಿಂಗಳಿನಿಂದ ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗುತ್ತಿರುವ ಟೊಮೊಟೊ ದರ ಶತಕದ ಸಮೀಪಕ್ಕೆ ಬಂದಿದೆ. ಟೊಮೊಟೊ ಬೆಲೆ ಏರಿಕೆಯಿಂದ ಗ್ರಾಹಕರು ಕಂಗಾಲಾಗಿದ್ದಾರೆ.
ತಳ್ಳುವ ಗಾಡಿಗಳಲ್ಲಿ ಚಿಲ್ಲರೆ ಮಾರಾಟ ದರ 90ರೂವರೆಗೆ ಏರಿಕೆಯಾಗಿದೆ. ಮಾರುಕಟ್ಟೆಗೆ ಬರುವ ಟೊಮೊಟೊ ಪ್ರಮಾಣದಲ್ಲಿ ಇಳಿಕೆಯಾಗಿದ್ದರಿಂದ ಬೆಲೆ ಏರಿಕೆಯಾಗಿದೆ.
ಪ್ರತಿಯೊಂದು ತಿಂಡಿಗಳನ್ನು ಮಾಡಬೇಕೆಂದರೆ ಟೊಮೊಟೋ ಬೇಕೇ ಬೇಕು. ಹೀಗಾಗಿ ಗ್ರಾಹಕರು ಬೆಲೆ ಜಾಸ್ತಿಯಾದರೂ ಟೊಮೊಟೋ ಕೊಂಡುಕೊಳ್ಳಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಹೆಚ್ಚಿನ ಬೆಲೆ ಇರುವುದರಿಂದ ಒಂದು ಕೆಜಿ ಟೊಮೊಟೊ ತೆಗೆದುಕೊಳ್ಳುವ ಬದಲು ಅರ್ಧ ಕೆಜಿ ಹಾಗೂ ಕಾಲು ಕೆಜಿ ತೆಗೆದುಕೊಳ್ಳುತ್ತಿದ್ದಾರೆ.
ಮುಂದಿನ ದಿನಗಳಲ್ಲಿ ಟೊಮೊಟೊ ಇಳುವರಿ ಜಾಸ್ತಿಯಾದರಷ್ಟೇ ಬೆಲೆ ಕಡಿಮೆಯಾಗಲಿದೆ. ಟೊಮೊಟೊ ಬೆಳೆದ ರೈತರ ಮೊಗದಲ್ಲಿ ಸಂತಸ ಮೂಡಿದರೆ, ಕೊಳ್ಳುವವರ ಜೇಬಿಗೆ ಕತ್ತರಿ ಬೀಳುತ್ತಿದೆ.





