ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಪಕ್ಷದ ವಕ್ತಾರೆ ಭವ್ಯ ನರಸಿಂಹಮೂರ್ತಿ ಅವರು ಪ್ರಾದೇಶಿಕ ಸೇನೆಯಲ್ಲಿ ಕಮಿಷಂಡ್ ಆಫೀಸರ್ ಆಗಿ ನಿಯೋಜನೆಗೊಂಡಿದ್ದಾರೆ.
ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಭವ್ಯ ನರಸಿಂಹಮೂರ್ತಿ ಅವರು, ಭಾರತೀಯ ಸೇನೆ ಸಮವಸ್ತ್ರದಲ್ಲಿ ತರಬೇತಿ ಪಡೆಯುತ್ತಿರುವ ಭಾವಚಿತ್ರಗಳನ್ನು ಹಂಚಿಕೊಂಡಿ, ಇದು ನನ್ನ ಜೀವನದ ಹೆಮ್ಮೆಯ ಕ್ಷಣ ಎಂದು ಹೇಳಿದ್ದಾರೆ.
ಇನ್ನು ಮುಂದೆ ನಾನು ದೇಶದ ಒಳಗೆ ರಾಜಕಾರಣಿಯಾಗಿ ನನ್ನ ಜನರ ಸೇವೆ ಸಲ್ಲಿಸುವುದರ ಜೊತೆಗೆ ಭಾರತೀಯ ಸೇನಾಧಿಕಾರಿಯಾಗಿ ದೇಶ ಕರೆದಾಗ ಗಡಿಯಲ್ಲಿ ರಕ್ಷಣೆ ಮಾಡಲೂ ಸಿದ್ಧಳಿದ್ದೇನೆ. ನಿಮ್ಮೆಲ್ಲರ ಪ್ರೀತಿ ಅಭಿಮಾನ ಹಾಗೂ ಆಶೀರ್ವಾದ ನನ್ನ ಮೇಲೆ ಇರಲಿ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ದಕ್ಷಿಣ ಭಾರತದಿಂದ ಆಯ್ಕೆಯಾಗಿರುವ ಮೊದಲ ಮಹಿಳಾ ಪ್ರಾದೇಶಿಕ ಸೇನಾ ಅಧಿಕಾರಿಯಾಗಿರುವ ಭವ್ಯ ನರ ನರಸಿಂಹಮೂರ್ತಿ ಅವರು 2022ನೇ ಸಾಲಿನ ಪರೀಕ್ಷೆಯಲ್ಲಿ ಆಯ್ಕೆಯಾದ ಏಕೈಕ ಮಹಿಳಾ ಪ್ರಾದೇಶಿಕ ಸೇನಾ ಅಧಿಕಾರಿ ಎಂಬ ಹೆಗ್ಗಳಿಕೆ ಅವರದ್ದಾಗಿದೆ.
ಕಾಶ್ಮೀರದಲ್ಲಿ ಭಾರತ ಪಾಕಿಸ್ಥಾನ ಗಡಿ ಬಳಿ ಇರುವ ಭಾರತೀಯ ಸೇನಾ ಘಟಕದಲ್ಲಿ ತರಬೇತಿ ಪಡೆದು ಲೆಫ್ಟಿನಂಟ್ ಆಗಿ ನಿಯೋಜನೆಗೊಂಡಿದ್ದಾರೆ. ಪ್ರಾದೇಶಿಕ ಸೇನೆಯು ಭಾರತೀಯ ನಾಗರಿಕರಿಗೆ ತಮ್ಮ ನಾಗರಿಕ ವೃತ್ತಿಯ ಜೊತೆಗೆ ಭಾರತೀಯ ಸೇನೆಯ ಭಾಗವಾಗಿ ದೇಶ ಸೇವೆಯ ಅವಕಾಶವಾಗಿದೆ. ಪ್ರಸ್ತುತ ಪ್ರಾದೇಶಿಕ ಸೇನೆಯಲ್ಲಿ ಕೆಲವು ಪ್ರಮುಖ ವ್ಯಕ್ತಿಗಳಿದ್ದಾರೆ. ಅದರಲ್ಲಿ ಕ್ರಿಕೆಟ್ ಆಟಗಾರ ಎಂ.ಎಸ್ ಧೋನಿ, ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲೆಟ್, ಮಾಜಿ ಕೇಂದ್ರ ಸಚಿವ ಅನುರಾಗ್ ಠಾಕೂರ್ ಸೇರಿ ಇತರರು ಇದರಲ್ಲಿದ್ದಾರೆ.