Mysore
17
clear sky

Social Media

ಗುರುವಾರ, 22 ಜನವರಿ 2026
Light
Dark

ಬೆಂಗಳೂರು ಕಾಲ್ತುಳಿತ ಪ್ರಕರಣ : ಎನ್‌ಐಎ ತನಿಖೆ ಸಾಧ್ಯತೆ

nia

ಬೆಂಗಳೂರು : 11 ಜನ ಸಾವಿಗೆ ಕಾರಣವಾಗಿರುವ ಚಿನ್ನಸ್ವಾಮಿ ಕ್ರೀಡಾಂಗಣ ಕಾಲ್ತುಳಿತ ಪ್ರಕರಣವನ್ನು ರಾಷ್ಟ್ರೀಯ ತನಿಖಾದಳ(ಎನ್‍ಐಎ) ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.

ಕಾಲ್ತುಳಿತ ಪ್ರಕರಣವು ದಿನದಿಂದ ದಿನಕ್ಕೆ ಬೇರೆ ಬೇರೆ ಆಯಾಮ ಪಡೆದುಕೊಳ್ಳುತ್ತಿರುವುದರಿಂದ ಎನ್‍ಐಎ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆಯನ್ನು ಮುಂದಿನ ವಾರದಿಂದ ಪ್ರಾರಂಭಿಸಲಿದೆ ಎಂದು ಗೊತ್ತಾಗಿದೆ.

ಇದು ಆಕಸ್ಮಿಕವಾಗಿ ನಡೆದ ಘಟನೆಯೋ ಅಥವಾ ಇದರ ಹಿಂದೆ ಯಾವುದಾದರೂ ಸಂಘಟನೆಗಳ ಕೈವಾಡ ಇದೆಯೇ ಎಂಬುದನ್ನು ಪತ್ತೆ ಮಾಡಲು ಎನ್‍ಐಎ ಮುಂದಾಗಿದೆ.

ಮೂಲಗಳ ಪ್ರಕಾರ ಆರ್.ಸಿ.ಬಿ ವಿಜಯೋತ್ಸವದ ಸಂದರ್ಭದಲ್ಲಿ ಕೆಲವು ಅಧಿಕಾರಿಗಳ ಮೇಲೆ ಸರ್ಕಾರದ ಮಟ್ಟದಲ್ಲಿ ಪ್ರಭಾವಿಯಾಗಿರುವವರ ಒತ್ತಡ ಹಾಕಿಯೇ ಆಯೋಜನೆ ಮಾಡಿದ್ದರು ಎಂಬ ಆರೋಪ ಕೇಳಿಬಂದಿದೆ.

ಹೀಗಾಗಿ ಏಕಾಏಕಿ ಕಾರ್ಯಕ್ರಮವನ್ನು ಆಯೋಜಿಸಿದ್ದರ ಉದ್ದೇಶ? ಕಾರ್ಯಕ್ರಮದಲ್ಲಿ ಪ್ರಭಾವಿ ಸಚಿವರ ಪುತ್ರರೊಬ್ಬರು ವೇದಿಕೆ ಮೇಲೆ ಕಾಣಿಸಿಕೊಂಡಿದ್ದು ಏಕೆ ಎಂಬ ಪ್ರಶ್ನೆ ಎದುರಾಗಿದೆ.

ಹೀಗಾಗಿ ಪ್ರಕರಣದ ಹಿಂದೆ ಯಾವುದಾದರೂ ಸಂಘಟನೆಗಳ ಕೈವಾಡ, ಸಮಾಜಘಾತುಕ ಶಕ್ತಿಗಳ ಶಾಮೀಲು ಕುರಿತಂತೆ ಎನ್‍ಐಎ ತನಿಖೆ ನಡೆಸಲು ಮುಂದಾಗಿದೆ ಎಂದು ಮೂಲಗಳು ಖಚಿತಪಡಿಸಿವೆ.

ಕರ್ತವ್ಯ ನಿರ್ಲಕ್ಷ್ಯ ಆರೋಪದ ಮೇಲೆ ಸೇವೆಯಿಂದ ಅಮಾನತುಗೊಂಡಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ, ಹೆಚ್ಚುವರಿ ಪೊಲೀಸ್ ಆಯುಕ್ತ ವಿಕಾಸ್‍ಕುಮಾರ್, ಡಿಸಿಪಿ ಶೇಖರ್ ಅವರುಗಳ ದೂರವಾಣಿ ಕರೆಗಳ ವಿವರವನ್ನು ನೀಡುವಂತೆ ಎನ್‍ಐಎ ಈಗಾಗಲೇ ಸೂಚನೆ ಕೊಟ್ಟಿದೆ.

ಇದನ್ನೂ ಓದಿ:- 11 ಜನರ ಸಾವಿಗೆ ಸಿಎಂ, ಡಿಸಿಎಂ, ಗೃಹ ಸಚಿವರೇ ನೇರ ಹೊಣೆ: ನಿವೃತ್ತ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್

ಕಾರ್ಯಕ್ರಮ ಆಯೋಜಿಸಲು ಕೆಲವು ಹಿರಿಯ ಅಧಿಕಾರಿಗಳು ವಿರೋಧ ವ್ಯಕ್ತಪಡಿಸಿದ್ದರು. ಆದರೆ ಸರ್ಕಾರದ ಮಟ್ಟದಲ್ಲಿ ಪ್ರಭಾವಶಾಲಿಯಾಗಿರುವ ಇಬ್ಬರು ಒತ್ತಡ ಹಾಕಿಯೇ ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು ಎಂಬ ಆರೋಪವೂ ಇದೆ.

ಆರ್.ಸಿ.ಬಿ ವಿಜೇತರಾದ ನಂತರ ಬೆಂಗಳೂರಿಗೆ ಮುಂಜಾನೆಯಿಂದಲೇ ರಾಜ್ಯದ ವಿವಿಧ ಭಾಗಗಳಿಂದ ನಿರೀಕ್ಷೆಗೂ ಮೀರಿದ ಅಭಿಮಾನಿಗಳು ಚಿನ್ನಸ್ವಾಮಿ ಕ್ರೀಡಾಂಗಣ ಹಾಗೂ ವಿಧಾನಸೌಧದತ್ತ ದೌಡಾಯಿಸಿದ್ದರು.

ಇಷ್ಟು ದೊಡ್ಡ ಮಟ್ಟದಲ್ಲಿ ಅಭಿಮಾನಿಗಳು ಆಗಮಿಸಿದ್ದರೂ ಭದ್ರತೆಯನ್ನು ಏಕೆ ಒದಗಿಸಲಾಗಲಿಲ್ಲ? ಉದ್ದೇಶಪೂರಕವಾಗಿ ನಿರ್ಲಕ್ಷ್ಯ ಮಾಡಲಾಯಿತೇ? ಇಲ್ಲವೇ ಆಕಸ್ಮಿಕವಾಗಿ ನಡೆದ ಘಟನೆಯೇ ಎಂಬುದರ ಬಗ್ಗೆ ವಿಸ್ತೃತ ತನಿಖೆಯನ್ನು ಎನ್‍ಐಎ ಕೈಗೆತ್ತಿಕೊಳ್ಳಲಿದೆ.

Tags:
error: Content is protected !!