ಬೆಂಗಳೂರು: ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ವಿದ್ಯಾವಂತ ಸಂಸದ ಬೇಕು ಎಂದು ಜನ ನನ್ನನ್ನು ತಿರಸ್ಕರಿಸಿದ್ದಾರೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಸೋಲಿನ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಿ.ಕೆ.ಸುರೇಶ್ ಹಾಗೂ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಡಾ.ಸಿ.ಎನ್.ಮಂಜುನಾಥ್ ಅವರನ್ನು ಕಣಕ್ಕಿಳಿಸಲಾಗಿತ್ತು.
ಆದರೆ ಈ ಬಾರಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡ ಪರಿಣಾಮ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಭಾರೀ ಮತಗಳ ಅಂತರದಿಂದ ಸೋಲನ್ನು ಅನುಭವಿಸಿದರು. ಮೊದಲ ಚುನಾವಣೆಯಲ್ಲಿ ಜಯದೇವ ಆಸ್ಪತ್ರೆ ಮುಖ್ಯಸ್ಥ ಡಾ.ಸಿ.ಎನ್.ಮಂಜುನಾಥ್ ಅವರು ಜಯಗಳಿಸಿ ಸಂಸತ್ ಪ್ರವೇಶ ಮಾಡಿದರು.
ತಮ್ಮ ಸೋಲಿನ ಬಗ್ಗೆ ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಸಂಸದ ಡಿ.ಕೆ.ಸುರೇಶ್ ಎಲ್ಲಾ ಚುನಾವಣೆಯಲ್ಲೂ ಜಾತಿ ಧರ್ಮ ಮುಖ್ಯವಾಗಿರುತ್ತವೆ. ಒಳ್ಳೆಯ ಕೆಲಸಗಳಿಗಿಂತ ಕೆಟ್ಟದ್ದು ಜಾಸ್ತಿ ಪ್ರಚಾರವಾಗಿದ್ದರಿಂದಲೇ ನನ್ನ ಸೋಲಾಗಿದೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ವಿದ್ಯಾವಂತ ಸಂಸದ ಬೇಕು ಎಂದು ಜನ ಮಂಜುನಾಥ್‌ರನ್ನು ಗೆಲ್ಲಿಸಿದ್ದಾರೆ. ಈ ಬಾರಿ ಜನರ ವಿಶ್ವಾಸ ಗಳಿಸುವಲ್ಲಿ ನಾನು ಸಂಪೂರ್ಣ ವಿಫಲವಾಗಿದ್ದೇನೆ. ಜನರ ಆಯ್ಕೆಯನ್ನು ಸ್ವಾಗತಿಸುತ್ತೇನೆ ಎಂದು ಚುನಾವಣೆ ಸೋಲಿನ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.