Mysore
29
clear sky

Social Media

ಗುರುವಾರ, 29 ಜನವರಿ 2026
Light
Dark

ಬೆಂಗಳೂರು ಪ್ರೆಸ್ ಕ್ಲಬ್: ಡಿಕೆ ಶಿವಕುಮಾರ್‌ಗೆ ವರ್ಷದ ವ್ಯಕ್ತಿ ಪ್ರಶಸ್ತಿ ಪ್ರದಾನ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರೆಸ್‌ಕ್ಲಬ್‌ ಆಫ್ ಬೆಂಗಳೂರು ಕೊಡಮಾಡುವ “ವರ್ಷದ ವ್ಯಕ್ತಿ-ವಿಶೇಷ ವ್ಯಕ್ತಿ” ಹಾಗೂ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ, 2024ರ ಪ್ರೆಸ್ ಕ್ಲಬ್ ಡೈರಿಯನ್ನು ಬಿಡುಗಡೆಗೊಳಿಸಿದರು.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ವರ್ಷದ ವ್ಯಕ್ತಿ ಪ್ರಶಸ್ತಿ ನೀಡಲಾಯಿತು. ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ, ಕಾರ್ಮಿಕ ಸಚಿವರಾದ ಸಂತೋಷ್ ಎಸ್ ಲಾಡ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಕೆ.ಗೋವಿಂದರಾಜು ಅವರಿಗೆ ವಿಶೇಷ ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸಲಾಯಿತು. ಸರ್ವೋಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿಗಳಾದ ಶಿವರಾಜ್ ಪಾಟೀಲ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಿಎಂ, ಸಂವಿಧಾನವೇ ನಮ್ಮ ಧರ್ಮ. ರಾಜಕೀಯ ಧರ್ಮ ಅನುಸರಿಸುವುದೇ ಸಂವಿಧಾನಕ್ಕೆ ಕೊಡುವ ಗೌರವ. ಸುದೀರ್ಘ ಮತ್ತು ಅರ್ಥಪೂರ್ಣ ಚರ್ಚೆಯ ಬಳಿಕ ನಮ್ಮ ಈ ಸಂವಿಧಾನ ಜಾರಿಯಾಗಿದೆ. ಆದ್ದರಿಂದ ಈ ಸಂವಿಧಾನವನ್ನು ಗೌರವಿಸುವುದು, ಪಾಲಿಸುವುದು ಎಲ್ಲಾ ರಾಜಕೀಯ ಪಕ್ಷಗಳ, ವ್ಯಕ್ತಿಗಳ ಕರ್ತವ್ಯ ಎಂದು ಹೇಳಿದರು.

ಅವಕಾಶ ವಂಚಿತರ ಪರವಾಗಿ, ಧ್ವನಿ ಇಲ್ಲದವರ ಪರವಾಗಿ ದ್ವನಿ ಎತ್ತಿ ಬೆಂಬಲಿಸುವುದು, ವಸ್ತುನಿಷ್ಠವಾಗಿ ಸುದ್ದಿಗಳನ್ನು ವರದಿ ಮಾಡುವುದು ಪತ್ರಿಕಾ ವೃತ್ತಿಯ ಮೂಲಭೂತ ಮೌಲ್ಯ. ಈ ಮೌಲ್ಯಗಳನ್ನು ಪಾಲಿಸುವುದೇ ಸಂವಿಧಾನಕ್ಕೆ ಕೊಡುವ ಗೌರವ. ಇದನ್ನು ಬಿಟ್ಟು ನನ್ನ ಕಾರಿನ ಮೇಲೆ ಕಾಗೆ ಕುಳಿತದ್ದನ್ನು ದೊಡ್ಡ ಚರ್ಚೆ ಮಾಡಿ ಮೌಡ್ಯ ಬೆಳೆಸಿದಂತಹ ರೀತಿಯಲ್ಲಿ ಕೆಲಸ ಮಾಡಬೇಡಿ ಎಂದು ಸಲಹೆ ನೀಡಿದರು.

ಯಾವುದೇ ಸರ್ಕಾರ ತಪ್ಪು ಮಾಡಿದರೂ ಅದನ್ನು ಹೇಳುವ ಧೈರ್ಯ ಪತ್ರಕರ್ತರಿಗೆ ಇರಬೇಕು. ಸ್ವಾತಂತ್ರ್ಯಪೂರ್ವದಲ್ಲಿ ದೇಶದ ಅಭಿವೃದ್ಧಿಯ ಚರ್ಚೆ ಮತ್ತು ಕನಸು ಇತ್ತು. ಈಗ ಮಾಧ್ಯಮ ಉದ್ಯಮಿಗಳ ಕೈಗೆ ಸಿಕ್ಕಿಕೊಂಡಿದೆ. ಉದ್ಯಮಿಗಳಿಗೆ ಸಮಾಜಮುಖಿಯಾದ ಯಾವ ಕಾಳಜಿಗಳೂ ಇರುವುದಿಲ್ಲ. ಈ ಬಗ್ಗೆ ಪತ್ರಕರ್ತ ಸಮೂಹ ಎಚ್ಚರ ವಹಿಸಬೇಕು. ನನ್ನನ್ನು ಜೆಡಿಎಸ್ ನಿಂದ ಉಚ್ಛಾಟಣೆ ಮಾಡಿದರೇ ಹೊರತು ನಾನು ಜೆಡಿಎಸ್ ಬಿಡಲಿಲ್ಲ. ಹೀಗಾಗಿ ವರದಿ, ವಿಶ್ಲೇಷಣೆ ಮಾಡುವಾಗ ನಾನು ಜೆಡಿಎಸ್ ಪಕ್ಷ ತೊರೆದೆ ಎಂದು ಬರೆಯುವುದು ಸರಿಯಲ್ಲ ಎಂದರು.

https://x.com/CMofKarnataka/status/1741400484429357414?s=20

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!