ಬೆಂಗಳೂರು: ಯುವತಿಗೆ ಮತ್ತೇರಿಸುವ ಔಷಧ ನೀಡಿ ಅತ್ಯಾಚಾರ ಎಸಗಿದ್ದಲ್ಲದೆ, ವಿಡಿಯೊ ಚಿತ್ರೀಕರಣ ಮಾಡಿಕೊಂಡು ಬೆದರಿಸಿ, ಜಾತಿ ನಿಂದನೆ ಮಾಡಿರುವ ಆರೋಪ ಸಂಬಂಧ ಇಲ್ಲಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ನಗರದ ಖಾಸಗಿ ಆಸ್ಪತ್ರೆಯಲ್ಲಿ ಶುಶ್ರೂಷಕಿ ಆಗಿರುವ 26 ವರ್ಷದ ಯುವತಿ, 2019 ರಲ್ಲಿ ಆರ್.ಟಿ ನಗರದ ಖಾಸಗಿ ಬ್ಯಾಂಕ್‌ವೊಂದರ ಕ್ರಿಡಿಟ್ ಕಾರ್ಡ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಆಗ ಆರೋಪಿ ಲಕ್ಷ್ಮೀರೆಡ್ಡಿಯ ಪರಿಚಯವಾಗಿತ್ತು.
ಆಂಧ್ರಪ್ರದೇಶ ಮೂಲದ ಆರೋಪಿ ಲಕ್ಷ್ಮೀರೆಡ್ಡಿ, 2019ರ ನವೆಂಬರ್‌ನಲ್ಲಿ ತನ್ನ ಸಹೋದರಿಯ ಹುಟ್ಟುಹಬ್ಬದ ಕಾರ್ಯಕ್ರಮವಿದೆ ಎಂದು ಆರ್.ಟಿ ನಗರದ ರೆಸಿಡೆನ್ಸಿಯೊಂದಕ್ಕೆ ಆಹ್ವಾನ ನೀಡಿ, ಚಹಾದಲ್ಲಿ ಮತ್ತು ಬರುವ ಔಷಧಿ ಬೆರಸಿ, ಕುಡಿಸಿ ಅತ್ಯಾಚಾರ ಮಾಡಿದ್ದಾನೆ ಎಂದು ಯುವತಿ ದೂರಿನಲ್ಲಿ ಆರೋಪಿಸಿದ್ದಾರೆ.
ಕೃತ್ಯದ ವಿಡಿಯೊ ಚಿತ್ರೀಕರಿಸಿಕೊಂಡಿದ್ದ ಆರೋಪಿ, ನಂತರದ ದಿನಗಳಲ್ಲಿ ತನಗೆ ಬೆದರಿಸಿ ನಿರಂತರವಾಗಿ ಲೈಂಗಿನ ಶೋಷಣೆಗೈದಿದ್ದಾನೆ. ತನ್ನ ಜಾತಿ ಹಾಗೂ ತಾಯಿಯ ಕುರಿತು ಕೀಳು ಭಾಷೆಯಲ್ಲಿ ನಿಂದಿಸಿದ್ದು, ಯುವತಿ ಮನೆಯಲ್ಲಿದ್ದ ಅಂಬೇಡ್ಕರ್ ಅವರ ಫೋಟೋ ತೆಗೆದು ಹಾಕುವಂತೆ ಕಿರುಕುಳ ನೀಡಿದ್ದಾನೆ. ಮೊಬೈಲ್ ಫೋನಿನ ವಾಲ್‌ಪೇಪರ್‌ನಲ್ಲಿದ್ದ ಅಂಬೇಡ್ಕರ್ ಅವರ ಫೋಟೊ ತೆಗೆದುಹಾಕುವಂತೆ ಬೆದರಿಸಿ ಮೊಬೈಲ್ ಒಡೆದು ಹಾಕಿದ್ದಾನೆ. ಸಾರ್ವಜನಿಕ ಸ್ಥಳದಲ್ಲಿ ಬಟ್ಟೆ ಹರಿದುಹಾಕಿ ಸಾಯಿಸುತ್ತೇನೆ ಎಂದು ಬೆದರಿಸಿದ್ದಾನೆ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸಂತ್ರಸ್ತ ಯವತಿ ದೂರು ನೀಡುತ್ತದ್ದಂತೆ ಆರೋಪಿ ಮೊಬೈಲ್ ಫೋನ್ ಸ್ವಿಷ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.