ಬೆಂಗಳೂರು : ಬಳ್ಳಾರಿಯಲ್ಲಿ ಗುರುವಾರ ರಾತ್ರಿ ವಾಲ್ಮೀಕಿ ಬ್ಯಾನರ್ ವಿಚಾರದಲ್ಲಿ ನಡೆದ ಎರಡು ಗುಂಪುಗಳ ಘರ್ಷಣೆ ವೇಳೆ ಫೈರಿಂಗ್ ಆಗಿ ಕಾಂಗ್ರೆಸ್ ಕಾರ್ಯಕರ್ತ ಬಲಿಯಾಗಿದ್ದಾರೆ. ಈ ಸಂಬಂಧ ಸಿಎಂ ಸಿದ್ದರಾಮಯ್ಯ ಮೊದಲ ಬಾರಿಗೆ ಸುದ್ದಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಗಲಾಟೆ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆವಾಗ ಗುಂಡು ರಾಜಶೇಖರ್ ಗೆ ತಗುಲಿದೆ. ಘಟನೆ ಬಗ್ಗೆ ತನಿಖೆ ಮಾಡಿ ಎಂದು ಪೊಲೀಸರಿಗೆ ಸೂಚಿಸಿದ್ದೇನೆ. ಯಾರ ಗನ್ ನಿಂದ ಹಾರಿದ ಗುಂಡು ತಗುಲಿದೆ ಎಂದು ತನಿಖೆ ನಡೆಯಲಿದೆ. ಪೊಲೀಸರ ತನಿಖೆಯಿಂದ ಗೊತ್ತಾಗಬೇಕಿದೆ ಎಂದು ಸಿಎಂ ಶುಕ್ರವಾರ ಮಧ್ಯಾಹ್ನ ಹೇಳಿದ್ದಾರೆ.
ಶಾಸಕ ಭರತ್ ರೆಡ್ಡಿ ವಿರುದ್ಧ ಗರಂ
ಈ ನಡುವೆ ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಸಿಎಂ, ಶಾಸಕ ನಾರಾ ಭರತ್ ರೆಡ್ಡಿ ವಿರುದ್ದ ಗರಂ ಆಗಿದ್ದಾರೆ ಎನ್ನಲಾಗಿದೆ. ಭರತ್ ರೆಡ್ಡಿ ಜತೆ ಫೋನ್ ಮೂಲಕ ಮಾತನಾಡಿಸಲು ನಾಯಕರು ಮುಂದಾಗಿದ್ದರು. ಈ ವೇಳೆ ಗರಂ ಆದ ಸಿಎಂ ಸಿದ್ದರಾಮಯ್ಯ, ನಾನು ಅವನ ಜೊತೆ ಮಾತನಾಡುವುದಿಲ್ಲ ಎಂದು ಹೇಳಿ ಬಿ.ನಾಗೇಂದ್ರ ಅವರ ಜೊತೆ ಮಾತನಾಡಿದ್ದಾರೆ ಎನ್ನಲಾಗಿದೆ. ನಂತರ ಸ್ಥಳಕ್ಕೆ ತೆರಳುವಂತೆ ಕಂಪ್ಲಿ ಶಾಸಕ ಗಣೇಶ್ ಗೂ ಸೂಚಿಸಿದ್ದಾರೆ ಎನ್ನಲಾಗಿದೆ.




