ಬೆಂಗಳೂರು ಉತ್ತರ ತಾಲೂಕಿನ ಭವಾನಿನಗರದ ನಿವಾಸಿ, ಕೊಡಗು ಮೂಲದ ವಿಶು ಉತ್ತಪ್ಪ ಎಂಬ ವಿದ್ಯಾರ್ಥಿ ಎದೆ ಭಾಗಕ್ಕೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 19 ವರ್ಷದ ವಿಶು ಉತ್ತಪ್ಪ ತನ್ನ ಕುಟುಂಬದವರ ಜತೆ ಕಳೆದ 15 ವರ್ಷಗಳಿಂದ ಭವಾನಿ ನಗರದಲ್ಲಿ ವಾಸವಿದ್ದು, ತಂದೆ ರೇಷನ್ ತರಲು ಹೋದಾಗ ಎದೆಗೆ ಗುಂಡು ಹಾರಿಸಿಕೊಂಡಿದ್ದಾನೆ.
ಇನ್ನು ತಾನು ಗುಂಡು ಹಾರಿಸಿಕೊಂಡ ವಿಷಯವನ್ನು ತಾನೇ ತನ್ನ ತಂದಗೆ ಕರೆ ಮಾಡಿ ವಿಶು ಉತ್ತಪ್ಪ ತಿಳಿಸಿದ್ದು, ತಂದೆ ಮನೆಗೆ ಬರುತ್ತಿದ್ದಂತೆ ಬಾಗಿಲು ತೆರೆದು ಕುಸಿದು ಬಿದ್ದಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಇನ್ನು ತಂದೆಗೆ ಕರೆ ಮಾಡಿ ತಾನು ಗುಂಡು ಹಾರಿಸಿಕೊಂಡ ವಿಷಯ ತಿಳಿಸಿದ ವಿಶು ಉತ್ತಪ್ಪ ಇನ್ನುಮುಂದೆ ತಾನು ತಪ್ಪು ಮಾಡುವುದಿಲ್ಲ ಎಂಬ ಮಾತನ್ನೂ ಸಹ ಹೇಳಿದ್ದನಂತೆ. ಮೃತನ ತಂದೆ ನೈಸ್ ರಸ್ತೆಯಲ್ಲಿ ಕೆಲಸ ಮಾಡುತ್ತಿದ್ದು, ಮೃತ ವಿಶು ಎಂಟನೇ ಮೈಲಿ ಸಮೀಪದ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಇ ವ್ಯಾಸಂಗ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ವಿಶೇಷ ಸೂಚನೆ: ಆತ್ಮಹತ್ಯೆ ಮಾಡಿಕೊಳ್ಳುವುದು ಎಲ್ಲಾ ಕಷ್ಟಗಳಿಗೂ ಪರಿಹಾರವಲ್ಲ. ಸಮಸ್ಯೆ ಏನೇ ಇದ್ದರೂ ಹತ್ತಿರದವರ ಜತೆ ಮಾತನಾಡಿ ಬಗೆಹರಿಸಿಕೊಳ್ಳಲು ಯತ್ನಿಸಿ. ಇಲ್ಲವಾದರೆ ಈ ಸಹಾಯವಾಣಿಗೆ ಕರೆ ಮಾಡಿ: 9152987821