ಬೆಂಗಳೂರು: ಆಸ್ತಿ ತೆರಿಗೆ ಪಾವತಿಸದೇ ಬಾಕಿ ಉಳಿಸಿಕೊಂಡಿರುವ ಕಾರಣ ರಾಜಭವನ, ವಿಧಾನಸೌಧ ಸೇರಿದಂತೆ ಒಟ್ಟು 258 ಸರ್ಕಾರ ಕಟ್ಟಡಗಳಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೋಟಿಸ್ ನೀಡಿದೆ.
ರಾಜ್ಯಾದ್ಯಂತ ಬಹುತೇಕ ಸರ್ಕಾರಿ ಇಲಾಖೆಗಳು ಸುಮಾರು 8 ಸಾವಿರ ಕೋಟಿ ರೂ.ಗಳಷ್ಟು ವಿದ್ಯುತ್ ಬಿಲ್ ಪಾವತಿಸದೇ ಬಾಕಿ ಉಳಿಸಿಕೊಂಡಿವೆ. ಇದರ ಬೆನ್ನಲ್ಲೇ ರಾಜಭವನ, ವಿಧಾನಸೌಧ ಮತ್ತು ವಿಕಾಸಸೌಧ ರಾಜಭವನ ಸೇರಿದಂತೆ 258 ಸರ್ಕಾರಿ ಕಟ್ಟಡಗಳು ಕೋಟಿಗಟ್ಟಲೆ ಆಸ್ತಿ ತೆರಿಗೆ ಪಾವತಿಸದೇ ಬಾಕಿ ಉಳಿಸಿಕೊಂಡಿರುವ ಕಾರಣ ನೋಟಿಸ್ ನೀಡಲಾಗಿದೆ. ಅಲ್ಲದೇ ಆ ಕಟ್ಟಡಗಳಲ್ಲಿ ಕೆಲವು ಸರ್ಕಾರಿ ಕಚೇರಿಗಳು 17 ವರ್ಷಗಳಿಂದ ತೆರಿಗೆ ಬಾಕಿ ಉಳಿಸಿಕೊಂಡಿವೆ. ಹೀಗಾಗಿ ಆಯಾ ಇಲಾಖೆ ಮುಖ್ಯಸ್ಥರಿಗೆ ತೆರಿಗೆ ಪಾವತಿಸುವಂತೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ನೋಟಿಸ್‌ನಲ್ಲಿ ನೀಡಿರುವ ಕಾಲಾವಧಿಯೊಳಗೆ ತೆರಿಗೆ ಪಾವತಿ ಮಾಡದಿದ್ದರೆ, ಸರ್ಕಾರದ ಗಮನಕ್ಕೆ ತಂದು ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.





