ಬೆಂಗಳೂರು: ನಗರದ ಅರಮನೆ ಮೈದಾನದಲ್ಲಿ ಎರಡು ದಿನಗಳ ಕಾಲ ನಡೆಯುವ ಅದ್ದೂರಿ ಕಂಬಳ ಮಹೋತ್ಸವಕ್ಕೆ ಅಶ್ವಿನ್ ಪುನೀತ್ ರಾಜ್ಕುಮಾರ್ ಅವರು ಚಾಲನೆ ನೀಡಿದ್ದಾರೆ. ರಾಜ್ಯಾದ್ಯಂತ ಕಂಬಳ ಪ್ರೇಮಿಗಳು ಕಂಬಳದಲ್ಲಿ ಭಾಗವಹಿಸಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಕಂಬಳ ಸ್ಪರ್ಧೆ ಶುರುವಾಗಿದ್ದು, ಕೋಣಗಳ ಓಟದ ರೋಮಾಂಚನಕಾರಿ ದೃಶ್ಯವನ್ನು ವೀಕ್ಷಕರು ಕಣ್ತುಂಬಿಕೊಳ್ಳುತ್ತಿದ್ದಾರೆ.
ಈ ಮಧ್ಯೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಂಬಳ ಆಯೋಜಕರಿಗೆ ಬಿಗ್ ಶಾಕ್ ನೀಡಿದೆ. ಅರಮನೆ ಮೈದಾನದ ಮುಂದೆ ಫ್ಲೈಕ್ಸ್, ಬ್ಯಾನರ್ ಹಾಕಿದ್ದಕ್ಕೆ ಕಂಬಳ ಆಯೋಜಕರಿಗೆ 50 ಸಾವಿರ ರೂ. ದಂಡ ವಿಧಿಸಿದೆ. ಇದಲ್ಲದೇ ಆಯೋಜಕರ ವಿರುದ್ಧ ಸದಾಶಿವನಗರ ಠಾಣೆಯಲ್ಲಿ ಬಿಬಿಎಂಪಿ ದೂರು ನೀಡಿದೆ. ಕಂಬಳಕ್ಕೆ ಶುಭಾಶಯ ಕೋರಿ ಹಾಕಿದ್ದ ಬ್ಯಾನರ್, ಸೇರಿದಂತೆ ಎಲ್ಲಾ ಬ್ಯಾನರ್ಗಳನ್ನು ತೆರವುಗೊಳಿಸಲಾಗಿದೆ.
ವಾಹನ ನಿಲುಗಡೆಗೆ ಹೆಚ್ಚಿನ ಶುಲ್ಕ: ಸಾರ್ವಜನಿಕರ ಅಸಮಧಾನ
ಕಂಬಳ ವೀಕ್ಷಿಸಲು ಜನ ಸಾಗರವೇ ಹರಿದು ಬರುತ್ತಿದೆ. ಈ ವೇಳೆ ವಾಹನ ನಿಲುಗಡೆಗೆ ಬರೋಬ್ಬರಿ ೧೫೦ರೂ. ಶುಲ್ಕ ವಿಧಿಸಲಾಗುತ್ತಿದ್ದು, ಕಂಬಳ ವಿಕ್ಷಿಸಲು ಬಂದ ಸಾರ್ವಜನಿಕರು ಈ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ದಾರೆ.