ಬೆಂಗಳೂರು : ಡೆಂಗ್ಯೂ ಕುರಿತು ಜಾಗೃತಿ ಮೂಡಿಸುವ ರೀಲ್ಸ್ ಮಾಡಿ ಬಹುಮಾನ ಗೆಲ್ಲಿ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಾರ್ವಜನಿಕ ಪ್ರಕಟಣೆ ಹೊರಡಿಸಿದೆ.
ರಾಜ್ಯಾದ್ಯಂತ ಹಾಗೂ ಬೆಂಗಳೂರಿನಲ್ಲಿ ಪ್ರತಿದಿನ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿದೆ. ಅಲ್ಲದೆ ಸಾವು ನೋವು ಕೂಡ ಸಂಭವಿಸುತ್ತಿವೆ. ಈ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಈ ರೀಲ್ಸ್ ಪ್ರಿಯರಿಗೆ ಬಂಪರ್ ಆಫರ್ ನೀಡಿದೆ.
ಸಾಮಾಜಿಕ ಜಾಲತಾಣದಲ್ಲಿ ಡೆಂಗ್ಯೂ ಕುರಿತು ರೀಲ್ಸ್ ವೀಡಿಯೋಗಳನ್ನ ಬಿಬಿಎಂಪಿ ಆಹ್ವಾನಿಸಿದೆ. ಅಲ್ಲದೆ ರೀಲ್ಸ್ ಮೂಲಕ ಜಾಗೃತಿ ಮೂಡಿಸುವವರಿಗೆ ಬಹುಮಾನ ಕೂಡ ನೀಡಲಾಗುತ್ತಿದೆ. ಮೊದಲ ಐದು ಉತ್ತಮ ರೀಲ್ಸ್ ಗೆ ೨೫ ಸಾವಿರ ಬಹುಮಾನ ನೀಡಲಾಗುತ್ತಿದೆ. ಅಲ್ಲದೆ ದ್ವಿತೀಯ ಬಹುಮಾನಕ್ಕೆ ಆಯ್ಕೆಯಾಗುವ ಐವರಿಗೆ ತಲಾ ೧೦ ಸಾವಿರ ಬಹುಮಾನ ನೀಡುವುದಾಗಿ ಬಿಬಿಎಂಪಿ ಪ್ರಕಟಣೆಯಲ್ಲಿ ತಿಳಿಸಿದೆ.
ಇದರ ಜೊತೆಗೆ ಉತ್ತಮ ರೀತಿಯಲ್ಲಿ ಹೆಚ್ಚು ವಿದ್ಯಾರ್ಥಿಗಳ ಮೂಲಕ ರೀಲ್ಸ್ ಮಾಡಿಸುವ ಶಾಲೆಗೆ ಬರೋಬ್ಬರಿ ೧ ಲಕ್ಷ ಬಹುಮಾನ ನೀಡುವುದಾಗಿ ಬಿಬಿಎಂಪಿ ತಿಳಿಸಿದೆ. ಮಕ್ಕಳಿಗೆ ಜಾಗೃತಿ ಮೂಡಿಸುವ ವೀಡಿಯೋ ಮಾಡಲು ಉತ್ತೇಜಿಸುವ ಶಿಕ್ಷಕರಿಗೂ ೩೫ ಸಾವಿರ ಬಹುಮಾನ ನೀಡುವುದಾಗಿ ಹೇಳಿದೆ.