ಬೆಳಗಾವಿ: ಬೆಳಗಾವಿಯಲ್ಲಿ ಡಿಸೆಂಬರ್.9ರಿಂದ ಚಳಿಗಾಲದ ಅಧಿವೇಶನ ನಡೆಯಲಿದೆ.
ಈ ಬಗ್ಗೆ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು, ಕಲಾಪವನ್ನು ರಚನಾತ್ಮಕವಾಗಿ ನಡೆಸಲು ಪರಿಷತ್ ಸದಸ್ಯರಿಗೆ ಅನೇಕ ಸಲಹೆಗಳನ್ನು ನೀಡಲಾಗಿದೆ.
ಮಂಗಳವಾರ ಹಾಗೂ ಬುಧವಾರ ಪ್ರಶ್ನೋತ್ತರ ವೇಳೆಯ ನಂತರ ಸಂಪೂರ್ಣ ಕಿತ್ತೂರು ಕಲ್ಯಾಣ ಪ್ರಾಂತ್ಯಗಳ ಅಭಿವೃದ್ಧಿ ಕುರಿತು ಚಿಂತನೆ ನಡೆಸಲು ಸದಸ್ಯರಿಗೆ ಸಲಹೆ ನೀಡಲಾಗಿದೆ ಎಂದರು.
ಈ ಬಾರಿ ಪರಿಷತ್ತಿನ ಒಟ್ಟು 1397 ಪ್ರಶ್ನೆಗಳನ್ನು ಸ್ವೀಕರಿಸಲಾಗಿದ್ದು, ಅದರಲ್ಲಿ 150 ಚುಕ್ಕೆ ಗುರುತಿನ ಪ್ರಶ್ನೆಗಳು ಹಾಗೂ 81 ಗಮನ ಸೆಳೆಯುವ ಸೂಚನೆಗಳು ಬಂದಿರುತ್ತವೆ ಎಂದರು.
ಮೊದಲ ವಾರ ಯುಕೆಪಿ, ಮಹದಾಯಿ, ರೈತರ ಸಮಸ್ಯೆ, ಕಬ್ಬು ಬೆಳೆಗಾರರ ಸಮಸ್ಯೆಗಳ ಕುರಿತ ಚರ್ಚೆಗಳಿಗೆ ಒತ್ತು ನೀಡಲಾಗುವುದು.
ಇನ್ನು ಮಕ್ಕಳ ರಕ್ಷಣೆ ಕುರಿತು ಅರಿವು ಮೂಡಿಸಲು ಕ್ರಮವಹಿಸಲಾಗುತ್ತಿದ್ದು, ಪರಿಷತ್ ಸದಸ್ಯರ ವೇದಿಕೆ ಮಾಡಿ ಮಕ್ಕಳ ಹಕ್ಕುಗಳ ರಕ್ಷಣೆಗೆ ಸರ್ಕಾರಕ್ಕೆ ಸಲಹೆ ನೀಡಲು ಕ್ರಮ ವಹಿಸಲಾಗುವುದು.
ಅಧಿವೇಶನ ನಡೆಸಲು ಈ ಬಾರಿ 20 ಕೋಟಿ ಅಂದಾಜಿಸಲಾಗಿದೆ. ಶಾಸಕರ ಭವನ ನಿರ್ಮಿಸಲು ಕೆಲವು ಪ್ರಸ್ತಾವನೆಗಳು ಬಂದಿವೆ. ಇವುಗಳ ಬಗ್ಗೆ ಕೂಲಂಕುಷವಾಗಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಬೆಳಗಾವಿ ವಿಭಜನೆ ಸಾಧಕ-ಬಾಧಕಗಳ ಬಗ್ಗೆ ಸರ್ಕಾರದ ಹಂತದಲ್ಲಿ ಚರ್ಚೆಯಾಗಬೇಕಿದೆ ಎಂದು ತಿಳಿಸಿದರು.