ಹುಬ್ಬಳ್ಳಿ: ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗುತ್ತಿದ್ದು, ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೌನ ವಹಿಸಿರುವುದು ಏಕೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಪ್ರಶ್ನೆ ಮಾಡಿದ್ದಾರೆ.
ಈ ಬಗ್ಗೆ ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಂಸಾಚಾರ ಪೀಡಿತ ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ದೌರ್ಜನ್ಯ ಹಾಗೂ ಅವರ ಆಸ್ತಿ-ಪಾಸ್ತಿ ಹಾಗೂ ಮಂದಿರಗಳ ಮೇಲೆ ದಿನದಿಂದ ದಿನಕ್ಕೆ ದಾಳಿಗಳು ಹೆಚ್ಚಾಗಿಯೇ ನಡೆಯುತ್ತಿವೆ.
ಇಷ್ಟೆಲ್ಲಾ ಘಟನೆಗಳು ನಡೆದರೂ ಪ್ರಧಾನಿ ನರೇಂದ್ರ ಮೋದಿಯವರು ಮೌನ ವಹಿಸಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.
ಹಿಂದುಗಳ ಮೇಲಿನ ಹಲ್ಲೆ ಜೊತೆಗೆ ಭಾರತದ ಧ್ವಜಕ್ಕೆ ಅಗೌರವ ಮತ್ತು ರವೀಂದ್ರನಾಥ್ ಟ್ಯಾಗೋರ್ ಅವರ ಪ್ರತಿಮೆಯನ್ನು ಧ್ವಂಸಗೊಳಿಸಿರುವುದು ಅತ್ಯಂತ ಖಂಡನೀಯ ಎಂದರು.
ಈ ಬೆಳವಣಿಗೆಗಳೆಲ್ಲಾ ಆದ ಮೇಲೆ ಕೇಂದ್ರ ಸರ್ಕಾರ ಬಾಂಗ್ಲಾದೇಶದ ಬಗ್ಗೆ ಯಾವುದೇ ರೀತಿಯ ಮೃದುತ್ವ ತೋರಿಸಬಾರದು. ಅಪರಾಧಿಗಳನ್ನು ಕಾನೂನು ಕ್ರಮಕ್ಕೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ತಕ್ಷಣವೇ ಎಚ್ಚೆತ್ತುಕೊಂಡು ಒಂದು ದಿಟ್ಟ ನಿರ್ಧಾರ ಕೈಗೊಳ್ಳಬೇಕು ಎಂದು ಮತ್ತೊಮ್ಮೆಆಗ್ರಹಿಸಿದರು.





