ಹಾಸನ: ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡಿಸೇಲ್ ಮೇಲೆ ಅಬಕಾರಿ ಸುಂಕವನ್ನು 2ರೂ.ಗೆ ಹೆಚ್ಚಳ ಮಾಡಿರುದರಿಂದ ದೇಶದ ಜನತೆಗೆ ಯಾವುದೇ ರೀತಿ ಹೊರೆಯಾಗುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.
ಹಾಸನದಲ್ಲಿ ಇಂದು(ಏಪ್ರಿಲ್.9) ಜನಾಕ್ರೋಶ ಯಾತ್ರೆಯ ವೇಳೆ ಕೇಂದ್ರ ಸರ್ಕಾರ ವಿರುದ್ಧ ರಾಜ್ಯ ಸರ್ಕಾರ ವಿರೋಧ ವ್ಯಕ್ತಪಡಿಸಿರುವ ಬಗ್ಗೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಕೇಂದ್ರ ಸರ್ಕಾರ ಎಲ್‌ಪಿಜಿ ಪೆಟ್ರೋಲ್ ಮತ್ತು ಡಿಸೇಲ್ ಮೇಲಿನ ಅಬಕಾರಿ ಸುಂಕ ಹೆಚ್ಚಳ ಮಾಡಿರುವುದಕ್ಕೆ ಕಾರಣ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆಯ ಏರಿಕೆ ಮಾಡಿರುವುದು. ಆದರೆ ಈ ಬೆಲೆ ಏರಿಕೆಯಿಂದ ಯಾವುದೇ ರೀತಿ ದೇಶದ ಜನರಿಗೆ ಹೊರೆಯಾಗುವುದಿಲ್ಲವೆಂದು ಕೇಂದ್ರ ಸಚಿವರೇ ಸ್ಪಷ್ಟನೆ ನೀಡಿದ್ದಾರೆ. ಇನ್ನು ಗ್ಯಾಸ್‌ನ ದರ ಏರಿಕೆಯನ್ನು ಕಳೆದ ವರ್ಷಗಳಿಗೆ ಹೋಲಿಕೆ ಮಾಡಿ ನೋಡಿದರೆ 300 ಕಡಿತಗೊಳಿಸಿ 50 ರೂ.ಏರಿಕೆ ಮಾಡಿದ್ದಾರೆ ಅಷ್ಟೇ ಎಂದು ಹೇಳಿದರು.
ಕೇಂದ್ರ ಸರ್ಕಾರ ಬೆಲೆ ಏರಿಕೆ ಮಾಡಿರುವುದಕ್ಕೆ ಅಗತ್ಯ ಕಾರಣವಿದೆ. ಆದರೆ ರಾಜ್ಯ ಸರ್ಕಾರ ಅಗತ್ಯ ವಸ್ತುಗಳ ಮೇಲೆ ಬೆಲೆ ಏರಿಕೆ ಮಾಡಿರುದಕ್ಕೆ ಯಾವ ಕಾರಣವಿದೆ. ಯಾವ ಕಾರಣದಿಂದ ರಾಜ್ಯ ಸರ್ಕಾರ ದರ ಏರಿಕೆ ಮಾಡಿದೆ ಎಂಬುದನ್ನು ರಾಜ್ಯದ ಜನತೆಗೆ ತಿಳಿಸಲಿ ಎಂದರು.





