ಬೆಂಗಳೂರು: ಅಭಿವೃದ್ಧಿ ವಿಚಾರದಲ್ಲಿ ರಾಜ್ಯ ಸರ್ಕಾರದ ನಟ್ಟು, ಬೋಲ್ಟ್‌ಗಳು ಸಡಿಲವಾಗಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವ್ಯಂಗ್ಯ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಇಂದು(ಮಾರ್ಚ್.3) ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಸರ್ಕಾರ ಇಂದಿನ ಬಜೆಟ್ ಅಧಿವೇಶನ ಬಗೆಗಿನ ರಾಜ್ಯಪಾಲರ ಭಾಷಣದಲ್ಲಿ ರಾಜ್ಯಪಾಲರ ಸಮಯವನ್ನು ವ್ಯರ್ಥ ಮಾಡಿದ್ದು, ಅವರಿಂದ ಹುಸಿ ಸುಳ್ಳು ಹೇಳಿಸಿದ್ದಾರೆ. ಆದರೆ ಈ ಭಾಷಣದಲ್ಲಿ ಅಭಿವೃಧ್ಧಿ ವಿಚಾರ ಬಂದಾಗ ರಾಜ್ಯ ಸರ್ಕಾರದ ನಟ್ಟು, ಬೋಲ್ಟ್ ಸಡಿಲವಾಗಿರುವುದು ಸ್ಪಷ್ಟವಾಗಿ ಕಾಣುತ್ತಿದೆ ಎಂದು ಟೀಕಿಸಿದರು.
ರಾಜ್ಯಪಾಲರು ಮಾಡಿರುವ ಭಾಷಣ ಸಂಪೂರ್ಣವಾಗಿ ಸುಳ್ಳಿನಿಂದ ಕೂಡಿದ್ದು, ವಿಧಿಯಿಲ್ಲದೇ ಭಾಷಣ ಮಾಡಿದ್ದಾರೆ. ಆ ಭಾಷಣದಲ್ಲಿ ಸರ್ಕಾರ ಮಾಡಿರುವ ಅಭಿವೃದ್ಧಿ ಯೋಜನೆಗಳ ಬಗ್ಗೆ ಪ್ರಸ್ತಾಪವೇ ಇಲ್ಲ. ಎರಡು ವರ್ಷಗಳಿಂದ ನಾವು ಅಭಿವೃದ್ಧಿ ಭಾಗ್ಯವನ್ನು ಹೆಚ್ಚಿಸಿದ್ದೇವೆ ಎಂದು ಸುಳ್ಳು ಹೇಳಿಸಿದ್ದಾರೆ. ಆದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿಯೇ ಆಗಿಲ್ಲ ಎಂದು ವಾಗ್ದಾಳಿ ನಡೆಸಿದರು.





