ಬೆಂಗಳೂರು: ನಮ್ಮ ಬಿಜೆಪಿ ಪಕ್ಷವೂ ತ್ಯಾಗ ಮತ್ತು ಬಲಿದಾನ ಹೆಗ್ಗಳಿಕೆಯ ಸಂಕೇಯವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.
ಬಿಜೆಪಿ ಪಕ್ಷದ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು(ಏಪ್ರಿಲ್.6) ಆಯೋಜಿಸಿದ್ದ ಬಿಜೆಪಿ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಪಕ್ಷದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಸಹಸ್ರಾರು ತ್ಯಾಗ ಬಲಿದಾನಗಳ ಪ್ರತೀಕವಾಗಿ ಸೈದ್ಧಾಂತಿಕ ಹೋರಾಟದ ಪ್ರತಿಫಲವೇ ಬಿಜೆಪಿ. ಧೀನ ದಲಿತರ ಧ್ವನಿಯಾಗಿ, ದೇಶದ ಏಕತೆಗಾಗಿ ಹೋರಾಡುತ್ತಾ, ಪಕ್ಷ ಕಟ್ಟಿದ ಹಿರಿಯ ನೇತಾರರನ್ನು ಸ್ಮರಿಸಲಾಗಿದೆ ಎಂದರು.
ಸ್ವಂತ ಶಿಸ್ತು, ಬದ್ಧತೆ, ಸಮರ್ಪಣೆಯನ್ನು ಪ್ರತಿ ಕಾರ್ಯಕರ್ತರಲ್ಲಿ ತುಂಬಲು ಸಂಘದ ಹಿರಿಯರು ಬೆನ್ನ ಹಿಂದೆ ನಿಂತು ವಹಿಸಿದ ಪಾತ್ರ ನಾವೆಂದೂ ಮರೆಯುವಂತಿಲ್ಲ. ಸಂಘ ಸಂಸ್ಕಾರದ ಕಾರ್ಯಕರ್ತರಲ್ಲಿ ಭಾರತವನ್ನು ವಿಶ್ವಮಟ್ಟದಲ್ಲಿ ನಂ. 1 ಸ್ಥಾನಕ್ಕೆ ತರುವ ಸದೃಢ ಸಂಕಲ್ಪ ಇದ್ದರೆ, ಅದನ್ನು ಈಡೇರಿಸುವ ಗುರಿಯತ್ತ ಪ್ರಧಾನಿ ನರೇಂದ್ರ ಮೋದಿಯವರು ದಾಪುಗಾಲನ್ನಿಡುತ್ತಿದ್ದಾರೆ ಎಂದು ಹೇಳಿದರು.
ನಮ್ಮ ಸಂಘಟನೆಯ ಶಕ್ತಿಯನ್ನು ಕುಗ್ಗಿಸಲು ದುಷ್ಟ ಕಾಂಗ್ರೆಸ್ ಸರ್ಕಾರ ನಮ್ಮ ಕಾರ್ಯಕರ್ತರ ಮೇಲೆ ಸುಳ್ಳು ದೂರುಗಳನ್ನು ದಾಖಲಿಸಿ ಆತ್ಮಹತ್ಯೆ ಮಾಡಿಕೊಳ್ಳುವ ಮಟ್ಟಿಗೆ ಬೆದರಿಸುತ್ತಿದೆ. ಈ ಸಂಸ್ಥಾಪನೆಯ ದಿನ ನಾವೆಲ್ಲರೂ ಸಂಕಲ್ಪ ತೊಡೋಣ, ಕಾಂಗ್ರೆಸ್ ಸರ್ಕಾರದ ಯಾವುದೇ ಬೆದರಿಕೆಗಳನ್ನು ಹಿಮ್ಮೆಟ್ಟಿಸಲು ನಾವು ಶಕ್ತರಿದ್ದೇವೆ. ಪ್ರತಿಯೊಬ್ಬ ಕಾರ್ಯಕರ್ತನೊಂದಿಗೆ ಬಿಜೆಪಿ ಕರ್ನಾಟಕ ನೈತಿಕವಾಗಿ ಪ್ರತಿಯೊಬ್ಬ ಕಾರ್ಯಕರ್ತನ ರಕ್ಷಣೆಗೆ ನಿಲ್ಲಲಿದೆ ಎಂದು ಭರವಸೆ ನೀಡಿದು.
ಈ ರಾಜ್ಯದಲ್ಲಿ ಕಾಂಗ್ರೆಸ್ ದುರಾಡಳಿತ ತೊಲಗಿಸುವವರೆಗೂ ನಾವು ವಿರಮಿಸುವ ಪ್ರಶ್ನೆಯೇ ಇಲ್ಲ, ಆ ಮೂಲಕ ಭಾರತೀಯ ಜನತಾ ಪಾರ್ಟಿಯ ಸಂಸ್ಥಾಪನೆಯ ಉದ್ದೇಶವನ್ನು ನಾವು ಸಾರ್ಥಕಗೊಳಿಸಲು ಶ್ರಮಿಸೋಣ ಎಂದು ತಿಳಿಸಿದರು.