ಬೆಂಗಳೂರು: ರಾಜ್ಯ ಸರ್ಕಾರ ಬರಿದಾಗಿರುವ ಬೊಕ್ಕಸವನ್ನು ತುಂಬಿಕೊಳ್ಳಲು ವಿದ್ಯುತ್ ಬಿಲ್ ದರ ಏರಿಕೆ ಮಾಡಿ ಜನಸಾಮಾನ್ಯರ ಹಣವನ್ನು ಲೂಟಿ ಮಾಡಿ ಹಗಲು ದರೋಡೆ ಮಾಡಲು ಹೊರಟಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ನಿನ್ನೆಯಷ್ಟೇ ವಿದ್ಯುತ್ ಬಿಲ್ ದರ ಏರಿಕೆ ಮಾಡಿದ್ದ ಕಾಂಗ್ರೆಸ್ ಸರ್ಕಾರ ವಿದ್ಯುತ್ ಸ್ಮಾರ್ಟ್ ಮೀಟರ್ ಹೆಸರಿನಲ್ಲಿ 15,500 ಕೋಟಿ ರೂ. ಹಗರಣ ನಡೆಸುವ ಮೂಲಕ ಜನರ ಹಣ ಲೂಟಿ ಮಾಡಿರುವುದು ಬಯಲಾಗಿದೆ. ದೇಶದ ಇತರ ರಾಜ್ಯಗಳಲ್ಲಿ ಸ್ಮಾರ್ಟ್ ಮೀಟರ್ ಅಳವಡಿಕೆಗೆ 9,00 ರೂ. ಪಾವತಿಸಿದರೆ, ನಮ್ಮ ರಾಜ್ಯದಲ್ಲಿ ಮಾತ್ರ ಬರೋಬ್ಬರಿ 8,510 ರೂ. ದರ ನಿಗದಿ ಮಾಡಿರುವುದು ಹಗಲು ದರೋಡೆಯಲ್ಲದೇ ಬೇರೇನೂ ಅಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಬರಿದಾಗಿರುವ ಬೊಕ್ಕಸ ತುಂಬಿಸಿಕೊಳ್ಳಲು ಜನಸಾಮಾನ್ಯರ ಮೇಲೆ ಒಂದಿಲ್ಲೊಂದು ಬೆಲೆ ಏರಿಕೆಯ ಬರೆ ಎಳೆಯುತ್ತಿರುವ ರಾಜ್ಯ ಸರ್ಕಾರ ಸ್ಮಾರ್ಟ್ ಮೀಟರ್ ಅಳವಡಿಸುವುದನ್ನು ಕಡ್ಡಾಯಗೊಳಿಸಿ ಶೇ.400-800 ರಷ್ಟು ದರ ಏರಿಕೆ ಮಾಡಿರುವುದು ಗ್ಯಾರಂಟಿ ನಂಬಿ ಮತ ನೀಡಿದ ನಾಡಿನ ಜನರ ದುರ್ದೈವವೇ ಸರಿ ಎಂದು ಕಿಡಿಕಾರಿದ್ದಾರೆ.
ದಪ್ಪ ಚರ್ಮದ ಕಾಂಗ್ರೆಸ್ ಸರ್ಕಾರ ಲೂಟಿಕೋರತನ ನಿಲ್ಲಿಸಿ ವಿದ್ಯುತ್ ಸ್ಮಾರ್ಟ್ ಮೀಟರ್ ದರವನ್ನು ಈ ಹಿಂದಿನಂತೆಯೇ ನಿಗದಿಪಡಿಸದಿದ್ದರೆ ನಮ್ಮ ಬಜೆಪಿ ಪಕ್ಷ ನಾಡಿನ ಜನಸಾಮಾನ್ಯರ ಪರವಾಗಿ ಹೋರಾಟಕ್ಕಿಳಿಯಲಿದೆ ಎಂದು ಎಚ್ಚರಿಸಬಯಸುತ್ತೇನೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.





