ಬೆಂಗಳೂರು: ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಖುಷಿ ಪಡಿಸಲು ಬಿಜೆಪಿ ಅವರನ್ನು ಟೀಕಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಇಂದು(ಮಾರ್ಚ್.8) ಬಜೆಟ್ ಬಗ್ಗೆ ಬಿಜೆಪಿಗರು ಮಾತನಾಡುವ ಸ್ಥಿತಿಯಲ್ಲಿದ್ದಾರೆ ಎಂಬ ಡಿಕೆ ಶಿವಕುಮಾರ್ ಹೇಳಿಕೆ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಸಿಎಂ ಸಿದ್ದರಾಮಯ್ಯ ಅವರನ್ನು ಖುಷಿ ಪಡಿಸಿದರೆ ರಾಜ್ಯದ ಮುಖ್ಯಮಂತ್ರಿ ಆಗಬಹುದೆಂಬ ಭ್ರಮೆಯಲ್ಲಿ ಡಿ.ಕೆ.ಶಿವಕುಮಾರ್ ಇದ್ದಾರೆ. ಆದರೆ ಅದು ಅವರ ಭ್ರಮೆ ಎಂಬುದು ಅವರಿಗೆ ಅರಿವೇ ಇಲ್ಲ. ಆದಾಗ್ಯೂ ಡಿಕೆಶಿ ಇತ್ತೀಚಿನ ದಿನಗಳಲ್ಲಿ ಬಿಜೆಪಿ ಬಗ್ಗೆ ಟೀಕೆ ಮಾಡುತ್ತಿದ್ದರೆ, ಸಿದ್ದರಾಮಯ್ಯನವರು ಖುಷಿಯಾಗಿರುತ್ತಾರೆಂದು ತಿಳಿದಿರಹುದು. ಆದರೆ ಅದರಲ್ಲಿ ಡಿಕೆಶಿ ಸಂಪೂರ್ಣವಾಗಿ ವಿಫಲರಾಗುತ್ತಾರೆ ಎಂದರು.
ಇದೇ ಸಂದರ್ಭದಲ್ಲಿ ಬೆಂಗಳೂರು ನಗರ ವಿವಿಗೆ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಹೆಸರಿಡುವ ವಿಚಾರದ ಬಗ್ಗೆ ಮಾತನಾಡಿದ ಅವರು, ಈ ವಿಚಾರಕ್ಕೆ ಸಂಬಂಧಿಸಿದಂತೆ ನಾವು ಸದನದ ಚರ್ಚೆಯಲ್ಲಿ ಉತ್ತರ ನೀಡುತ್ತೇವೆ ಎಂದು ಹೇಳಿದರು.





